ಶಿವಮೊಗ್ಗ: ಹೊಸನಗರ ತಾಲೂಕು ಕಲ್ಲುಕೊಪ್ಪ, ಭೀಮನಕೆರೆ ಮತ್ತು ಸಿಡಿಯಾಪುರ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮದಲ್ಲಿ ಅದನ್ನು ಪರಿಹರಿಸಲು ಗ್ರಾಪಂ ಅಧಿಕಾರಿಗಳು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ
ಡಾ| ಎಂ.ಲೋಕೇಶ್ ಸೂಚನೆ ನೀಡಿದರು.
ತಾಲೂಕಿನ ಮಸಗಲ್ಲಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರಿಂದ
ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ತಾಲೂಕು ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಕಾಲದಲ್ಲಿ ಲಭ್ಯವಿಲ್ಲದ ಕಾರಣ ಆರೋಗ್ಯ ತಪಾಸಣೆಗೆ ಅಡಚಣೆ ಉಂಟಾಗುತ್ತಿದೆ. ಅಲ್ಲದೇ ವೈದ್ಯರು ಸೂಚಿಸುವ ಔಷಧಗಳು ಆಸ್ಪತ್ರೆಯಲ್ಲಿ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ವರದಿ ನೀಡುವಂತೆ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗುವುದು ಎಂದರು. 938 ಕುಟುಂಬಗಳಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡುಗೆ ಅನಿಲವನ್ನು ಬಳಸದೇ ಇರುವ ಕುಟುಂಬಗಳನ್ನು ಗುರುತಿಸಿ, ಅನಿಲಭಾಗ್ಯ ಯೋಜನೆ ಅಥವಾ ಉಜ್ವಲ ಯೋಜನೆಯಡಿ ಗ್ಯಾಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಪಡೆಯಲು ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಲು ನ. 24ರಂದು ಪಿಂಚಣಿ ಅದಾಲತ್‌ನ್ನು ಏರ್ಪಡಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.