ಬೆಂಗಳೂರು: ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅತಿಥಿಗೃಹ, ಕಚೇರಿ, ಶಾಲೆ, ಕಾಲೇಜುಗಳಲ್ಲಿ ಸ್ನಾನದ ಕೋಣೆಗಳೊಂದಿಗೆ ಪ್ರತ್ಯೇಕ ಕೊಠಡಿ ಇರುವ ಕಟ್ಟಡದ ವಿವರ ಸಿದ್ಧಪಡಿಸಿಕೊಂಡು, ತುರ್ತು ಸಂದರ್ಭಗಳಲ್ಲಿ ಇದರ ಬಳಕೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿಯಂತ್ರಣದ ದೃಷ್ಟಿಯಿಂದ ಕಾಲೇಜು ಶಿಕ್ಷಣ ಇಲಾಖೆಯು ಅಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹೊಸ ಆದೇಶವನ್ನು ಹೊರಡಿಸಿದೆ. ಪ್ರವೇಶ ಪರೀಕ್ಷೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ ಮೆಸೇಜ್ ಸರ್ವಿಸ್ ಮೂಲಕ ಜಾಗೃತಿ ಕಾರ್ಯ ಮಾಡುವುದು ಮತ್ತು ಸ್ವಯಂ ಸೇವಕರ ಗುಂಪುಗಳನ್ನು ರಚಿಸಿ ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸಲು ತಂಡಗಳನ್ನು ರಚಿಸಲು ನಿರ್ದೇಶಿಸಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ತುರ್ತು ಸೇವೆಗಳಿಗೆ ನಿಯೋಜಿಸುವುದು. ತುರ್ತು, ಮುಖ್ಯವಾದ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಆಯಾ ವಿವಿಗಳ ಕುಲಪತಿಗಳು, ಕುಲಸಚಿವರು, ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರು ಪ್ರತಿದಿನವೂ ತಮ್ಮ ಸಂಸ್ಥೆಗಳಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸಮನ್ವಯ ಸಾಧಿಸಲು ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇಲಾಖೆಯ ಆಯುಕ್ತರು ಇದರ ಮೇಲುಸ್ತುವಾರಿ ವಹಿಸಲಿದ್ದಾರೆ. ಹಾಗೆಯೆ ಎಲ್ಲಾ ವಿಶ್ವವಿದ್ಯಾಲಯ ಇಲಾಖೆಯ ಕಚೇರಿ ಮತ್ತು ಕಾಲೇಜುಗಳಲ್ಲಿ ನೀರು, ಸಾಬೂನು ಮತ್ತು ಸ್ಯಾನಿಟೈಜರ್ ಗಳನ್ನು ಇರಬೇಕು. ಯಾವುದೇ ರೀತಿಯ ಸಭೆ ಸೇರಿದ ವಿಡಿಯೋ ಕಾನ್ಫರೆನ್ಸ್ ಮತ್ತು ಆನ್ಲೈನ್ ವ್ಯವಸ್ಥೆಯ ಮೂಲಕ ಸಭೆ ನಡೆಸಿ ಮಾಹಿತಿ ಹಂಚಿಕೊಂಡು ಪ್ರಗತಿ ಸಾಧಿಸಲು ಇಲಾಖೆ ತಿಳಿಸಿದೆ.