Advertisement

ಅನಿಲಭಾಗ್ಯ ಕಿಟ್‌ ಶೀಘ್ರ ವಿತರಿಸಲು ಸೂಚನೆ

03:15 PM Aug 05, 2018 | |

ಬಳ್ಳಾರಿ: ಚುನಾವಣಾ ನೀತಿ ಸಂಹಿತೆ ಕಾರಣದಿಂದ ಗೋದಾಮಿನಲ್ಲಿಯೇ ಸಂಗ್ರಹಿಸಲಾಗಿರುವ ಅನಿಲಭಾಗ್ಯ ಕಿಟ್‌ ಇನ್ನೂ ಕೆಲದಿನಗಳು ಹಾಗೆಯೇ ಇಟ್ಟಲ್ಲಿ ಕೆಟ್ಟುಹೋಗುವ ಸಾಧ್ಯತೆ ಇದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದ್ದು, ಅವುಗಳನ್ನು ಈಗಾಗಲೇ ಗುರುತಿಸಲಾಗಿರುವ ಫಲಾನುಭವಿಗಳಿಗೆ ತ್ವರಿತವಾಗಿ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ| ಎನ್‌. ಕೃಷ್ಣಮೂರ್ತಿ ಹಾಗೂ ಸದಸ್ಯ ಡಿ.ಜಿ. ಹಸಬಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ರಾಜ್ಯ ಆಹಾರ ಆಯೋಗ ಜಿಲ್ಲೆಗೆ ಭೇಟಿ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 3500 ಫಲಾನುಭವಿಗಳನ್ನು ಗುರುತಿಸಲಾಗಿದೆ. ಆ ಪ್ರಮಾಣದ ಕಿಟ್‌ಗಳು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ. ಅವುಗಳನ್ನು ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ವಿತರಿಸಲು ನಿರ್ಣಯ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿಪಡಿಸಿದ ಪ್ರಮಾಣದಷ್ಟು ಪಡಿತರ ವಿತರಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ನಾವು ವಿವಿಧೆಡೆ ಭೇಟಿ ಕೊಟ್ಟಾಗಲೂ ನೈಜವಾಗಿ ಹಲವೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಪತ್ತೆಹಚ್ಚಿ ಲೈಸನ್ಸ್‌ ರದ್ದುಪಡಿಸಬೇಕು ಎಂದರು.

ಆಯೋಗದ ಸದಸ್ಯ ವಿ.ಬಿ. ಪಾಟೀಲ್‌ ಮಾತನಾಡಿ, ಪ್ರತಿಯೊಂದು ನ್ಯಾಯಬೆಲೆ ಅಂಗಡಿಯಲ್ಲಿ ಎಲೆಕ್ಟ್ರಾನಿಕ್‌ ತೂಕದ ಯಂತ್ರ ಹೊಂದಿರಬೇಕು. ಅವುಗಳ ಪರಿಶೀಲನೆ ಮತ್ತು ವ್ಯಾಲಿಡಿಟಿ ಪ್ರಮಾಣಪತ್ರ ಹೊಂದಿರತಕ್ಕದ್ದು ಎಂದು
ತಿಳಿಸಿದರು. 

ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಸಂಡೂರು ಮತ್ತು ಬಳ್ಳಾರಿಯ ವಿವಿಧ ಅಂಗನವಾಡಿ, ಹಾಸ್ಟೆಲ್‌ಗ‌ಳು, ಗೋದಾಮುಗಳು, ನ್ಯಾಯಬೆಲೆ ಅಂಗಡಿಗಳು ಮತ್ತು ಮಧ್ಯಾಹ್ನ ಉಪಹಾರ ಯೋಜನೆ ಪರಿಶೀಲಿಸಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ಚೆನ್ನಾಗಿ ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು. 

Advertisement

ನ್ಯಾ| ಎನ್‌.ಕೆ. ಪಾಟೀಲ್‌ ವರದಿಗೆ ಬೆಲೆಕೊಡಿ: ಅಪೌಷ್ಟಿಕತೆಗೆ ಸಂಬಂಧಿ ಸಿದಂತೆ ನ್ಯಾ| ಎನ್‌.ಕೆ. ಪಾಟೀಲ್‌ ನೀಡಿರುವ ಸಮಗ್ರ ವರದಿ ಬಗ್ಗೆ ತಮಗೆ ಗೊತ್ತಿಲ್ಲ. ಅದಕ್ಕೆ ತಾವು ಸ್ವಲ್ಪನೂ ಬೆಲೆಕೊಟ್ಟಿಲ್ಲ ಎಂದು ಆಯೋಗದ ಸದಸ್ಯ ವಿ.ಬಿ.ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ವರದಿ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಬಳ್ಳಾರಿ ವಿಮ್ಸ್‌ನಲ್ಲಿರುವ ಎಂಎನ್‌ಆರ್‌ಸಿ ಕೇಂದ್ರ ಸುಸಜ್ಜಿತವಾಗಿದ್ದು, ಅದಕ್ಕೆ ಅಪೌಷ್ಟಿಕ ಮಕ್ಕಳನ್ನು ಸೇರಿಸುವ ಕೆಲಸ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡುತ್ತಿಲ್ಲ. 

ಎಂಎನ್‌ಆರ್‌ಸಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ 72 ಜನರಿಗೆ ಇದುವರೆಗೆ ಅಪೌಷ್ಟಿಕತೆಗೆ ಸಂಬಂಧಿಸಿದ ಗೌರವಧನ ಒದಗಿಸುವ ಕೆಲಸ ಆರೋಗ್ಯ ಇಲಾಖೆ ಮಾಡುತ್ತಿಲ್ಲ ಎಂದು ದೂರಿದರು. ನಮ್ಮ ಆಯೋಗ ಸುಪ್ರೀಂಕೋರ್ಟನಲ್ಲಿ ಒಂದೇ ಒಂದು ಅಫಿಡವಿಟ್‌ ಸಲ್ಲಿಸಿದರೂ ತಮ್ಮ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಾಗುತ್ತದೆ. ಆ ರೀತಿಯಾಗದಂತೆ ನೋಡಿಕೊಂಡು ಕೆಲಸ ನಿರ್ವಹಿಸಿ ಎಂದು ಖಡಕ್‌ ಸೂಚನೆ ನೀಡಿದರು.

ಸದಸ್ಯರಾದ ಎಚ್‌. ಶಿವಶಂಕರ, ಮಹ್ಮದ ಅಲಿ, ಮಂಜುಳಾ ಬಾಯಿ, ಅಪರ ಜಿಲ್ಲಾಧಿಕಾರಿ ಎಸ್‌.ಜೆ. ಸೋಮಶೇಖರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್‌ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. ಇದಕ್ಕೂ ಮುನ್ನ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎನ್‌. ಕೃಷ್ಣಮೂರ್ತಿ ಅವರ ನೇತೃತ್ವದ ತಂಡ ಬಳ್ಳಾರಿಯ ವಿಮ್‌ ನಲ್ಲಿರುವ ಎಂಎನ್‌ಆರ್‌ಸಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ.

Advertisement

Udayavani is now on Telegram. Click here to join our channel and stay updated with the latest news.

Next