ಗದಗ: ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿದಾಖಲೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ರೈತರಿಂದ ಪಡೆದ ಅರ್ಜಿಗಳನ್ನು ಸಹ ವಿಲೇವಾರಿ ಮಾಡದೇ ಉಳಿಸಿಕೊಂಡಿದ್ದಾರೆ. ತಕ್ಷಣವೇ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ.ಶಿವಶಂಕರ್ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಆಹಾರ ಆಯೋಗವು ಸ್ವತಂತ್ರವಾಗಿದ್ದು, ಇಲಾಖೆಯ ಅಧಿಕಾರಿಗಳು ತಪ್ಪು ಮಾಡಿದಲ್ಲಿ ಶಿಕ್ಷೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲು ಅವಕಾಶವಿದೆ. ಅಧಿಕಾರಿಗಳು ವಿನಾಕಾರಣ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡದೇ, ಇರುವ ಸಮಸ್ಯೆಗಳನ್ನು ಪರಿಹರಿಸಿ ಅರ್ಹರಿಗೆ ಯೋಜನೆ ಸೌಲಭ್ಯ ದೊರಕಿಸಬೇಕು ಎಂದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ಸುಮಾರು ವರ್ಷಗಳಿಂದ ನೀಡಿರುವ ಅರ್ಜಿಗಳ ವಿಲೇವಾರಿ ಮಾಡದಿರುವುದು ಗಮನಕ್ಕೆ ಬಂದಿದೆ. ಶಿರಹಟ್ಟಿಯ ರೈತ ಸಂಪರ್ಕ ಕೇಂದ್ರವೊಂದರಲ್ಲಿಯೇ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಮುಂದಿನ ದಿನಗಳಲ್ಲಿ ಈ ರೀತಿಯ ವಿಳಂಬವನ್ನು ಆಯೋಗ ಸಹಿಸದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ಸರಿಯಾಗಿ ಸ್ಟಾಕ್ ರೆಜಿಸ್ಟರ್ ನಿರ್ವಹಿಸಿಲ್ಲ. ರೈತರಿಗೆ ಖರೀದಿಸಿದ ಬೀಜ, ಗೊಬ್ಬರಕ್ಕೆ ರಸೀದಿ ನೀಡದಿರುವುದನ್ನು ಗಮನಿಸಲಾಗಿದ್ದು, ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಂಗನವಾಡಿಗೆ ಪೂರೈಸುವ ಆಹಾರ ಸಾಮಗ್ರಿಗಳಿಗಾಗಿ ನರಗುಂದ ಎಂ.ಎಸ್.ಪಿ.ಟಿ.ಸಿ ಸಂಸ್ಥೆಗೆ ಸರ್ಕಾರದಿಂದ 1.70 ಕೋಟಿ ರೂ. ಅನುದಾನ ನೀಡುವುದು ಬಾಕಿ ಉಳಿಸಿಕೊಳ್ಳಲಾಗಿದೆ. ಬಾಕಿ ಉಳಿದಿರುವ ಮೊತ್ತವನ್ನುಶೀಘ್ರವೇ ಪಾವತಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ವಿತರಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ಶೀಘ್ರವೇ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ನಿಲ್ಲಿಸಿದರೆ ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆಯಾದಂತಾಗುತ್ತದೆ. ಇದನ್ನು ಮನವರಿಕೆ ಮಾಡಿಕೊಂಡು ಮಧ್ಯಾಹ್ನದ ಊಟ ಪೂರೈಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಸಕಾಲಕ್ಕೆ ವೈದ್ಯರು ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಈ ಪ್ರಕ್ರಿಯೆ ಜಿಲ್ಲೆಯಲ್ಲಿ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಮಕ್ಕಳ ಆರೋಗ್ಯದಲ್ಲಿ ನಿಷ್ಕಾಳಜಿ ಬೇಡ ಎಂದು ವೈದ್ಯರಿಗೆ ತಿಳಿಸಲಾಗಿದೆ ಎಂದರು.
ಅರ್ಹರಿಗೆ ಪಿಂಚಣಿ ಹಾಗೂ ಪಡಿತರ ಚೀಟಿ ವಿತರಣೆಗೆ ಅದಾಲತ್ ಕಾರ್ಯಕ್ರಮ ಏರ್ಪಡಿಸಿ, ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಪಿಂಚಣಿ ಮಂಜೂರು ಮಾಡಬೇಕು. ಪಡಿತರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಆಯೋಗದ ಸದಸ್ಯ ಬಿ.ಎ.ಅಹಮ್ಮದ್ ಅಲಿ, ಮಂಜುಳಾ ಸಾತನೂರ, ಆಹಾರ ಇಲಾಖೆ ಉಪನಿರ್ದೇಶಕ ವಿನೋದಕುಮಾರ್ ಹೆಗ್ಗಳಗಿ, ಸಹಾಯಕ ನಿರ್ದೇಶಕ ಗಿರಿಜಮ್ಮ ಉಪಸ್ಥಿತರಿದ್ದರು.