Advertisement

ಶೂನ್ಯ ಫ‌ಲಿತಾಂಶದ ಪಿಯು ಕಾಲೇಜುಗಳಿಗೆ ನೋಟಿಸ್‌

03:50 AM Jul 16, 2017 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫ‌ಲಿತಾಂಶ ದಾಖಲಿಸಿರುವ ಕಾಲೇಜುಗಳಿಗೆ ನೋಟಿಸ್‌ ಜಾರಿ ಮಾಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ವಾರದೊಳಗೆ ಉತ್ತರ ನೀಡುವಂತೆ ಗಡುವು ನೀಡಿದೆ. ಜತೆಗೆ ಕಳಪೆ
ಸಾಧನೆ ಮಾಡಿದ ಕಾಲೇಜುಗಳ ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ನೀಡಿದೆ.

Advertisement

ರಾಜ್ಯದ 127 ಖಾಸಗಿ, 3 ಸರ್ಕಾರಿ ಹಾಗೂ ತಲಾ ಒಂದೊಂದು ಅನುದಾನಿತ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ಸೇರಿದಂತೆ 132 ಪಿಯು ಕಾಲೇಜುಗಳು 2017ರ ದ್ವಿತೀಯ ಪಿಯುಸಿ ಫ‌ಲಿತಾಂಶದಲ್ಲಿ ಶೂನ್ಯ ಸಾಧನೆ ಮಾಡಿದೆ. ಬೆಂಗಳೂರಿನ ಒಂದು ಸಂಯುಕ್ತ ಪದವಿ ಪೂರ್ವ ಕಾಲೇಜು ಸೇರಿ 12, ಕಲಬುರಗಿಯ 25, ವಿಜಯಪುರದ
21, ಬೆಳಗಾವಿಯ 13, ಬೀದರ್‌ನ 10, ದಾವಣಗೆರೆಯ 6, ಬಳ್ಳಾರಿ ಹಾಗೂ ಬಾಗಲಕೋಟೆಯಲ್ಲಿ ತಲಾ 5, ಹಾವೇರಿ,
ಧಾರವಾಡ, ಮೈಸೂರು, ರಾಯಚೂರಿನಲ್ಲಿ ತಲಾ 4, ಗದಗ ಹಾಗೂ ತುಮಕೂರಿನಲ್ಲಿ ತಲಾ 3, ಚಿತ್ರದುರ್ಗ, ಕೊಪ್ಪಳ ಹಾಗೂ ಯಾದಗಿರಿಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಮಂಗಳೂರು, ಶಿವಮೊಗ್ಗ, ಕೊಡಗು ಹಾಗೂ ಕೋಲಾರದಲ್ಲಿ ತಲಾ 1 ಪಿಯು ಕಾಲೇಜುಗಳು ಶೂನ್ಯ ಫ‌ಲಿತಾಂಶ ಪಡೆದಿದೆ.

ಖಾಸಗಿ ವಿದ್ಯಾರ್ಥಿಗಳಿಗೆ ಕುಮ್ಮಕ್ಕು: ಕಲಬುರಗಿಯಲ್ಲಿ 25 ಹಾಗೂ ವಿಜಯಪುರ ಜಿಲ್ಲೆಯಲ್ಲಿ 21 ಕಾಲೇಜುಗಳು ಶೂನ್ಯ ಫ‌ಲಿತಾಂಶ ಪಡೆದಿವೆ. ಖಾಸಗಿ ಕಾಲೇಜಿನ ಹೆಸರಿನಲ್ಲಿ ಖಾಸಗಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು, ದ್ವಿತೀಯ
ಪಿಯುಸಿ ಪರೀಕ್ಷೆಗೆ ಅವಕಾಶ ನೀಡುತ್ತಿರುವುದು ಶೂನ್ಯ ಫ‌ಲಿತಾಂಶಕ್ಕೆ ಕಾರಣ. ಪಿಯುಸಿ ಪಾಸು ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಿಲ್ಲ ಮತ್ತು ಕಾಲೇಜಿಗೆ ಕಡ್ಡಾಯವಾಗಿ ಬರಬೇಕು ಎಂಬ ನಿಯಮವೂ ಇಲ್ಲ.
ಆದರೆ, ಇಲಾಖೆಯ ದಾಖಲೆಗಾಗಿ ವಿದ್ಯಾರ್ಥಿ ಗಳ ಶೇ.75 ಹಾಜರಾತಿ ತೋರಿಸಲಾಗುತ್ತದೆ.

ಅರ್ಹ ಉಪನ್ಯಾಸಕರು, ಸಮರ್ಥ ಆಡಳಿತ ಮಂಡಳಿ ಇರುವುದಿಲ್ಲ. ಹಣ ವಸೂಲಿ ಮಾಡುವುದಕ್ಕಾಗಿಯೇ ಇಂಥ ಕಾಲೇಜುಗಳು ತಲೆ ಎತ್ತಿರುತ್ತವೆ. ಪಾಲಕರು ಅಥವಾ ಪೋಷಕರು ಇಂತಹ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವಾಗ ಎಚ್ಚರ ವಹಿಸಬೇಕು ಎಂಬ ಕಾರಣಕ್ಕಾಗಿ ಶೂನ್ಯ ಫ‌ಲಿತಾಂಶದ ಕಾಲೇಜುಗಳ ಹೆಸರನ್ನು ಬಹಿರಂಗಪಡಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಕಾರಣ ಕೇಳಿ ನೋಟಿಸ್‌: ಶೂನ್ಯ ಫ‌ಲಿತಾಂಶ ಬಂದಿರುವ ಎಲ್ಲಾ ಕಾಲೇಜುಗಳಿಗೂ ಕಾರಣ ಕೇಳಿ ಪಿಯು ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿದ್ದು, ಉತ್ತರ ನೀಡಲು ಒಂದು ವಾರ ಸಮಯ ನೀಡಲಾಗಿದೆ. ಉತ್ತರ ನೀಡದ ಕಾಲೇಜುಗಳ ಶೈಕ್ಷಣಿಕ ನವೀಕರಣ ರದ್ದು ಮಾಡಲಾಗುತ್ತದೆ. ಈ ಶೈಕ್ಷಣಕ ವರ್ಷದಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳದಂತೆ
ಎಚ್ಚರಿಕೆಯನ್ನು ನೀಡಲಾಗುತ್ತದೆ. ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಡುವ ಚೆಲ್ಲಾಟಕ್ಕೆ ಸಂಪೂರ್ಣವಾಗಿ ತೆರೆ ಬೀಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next