ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಸುರಂಗ ರಸ್ತೆ (ಟನಲ್ ರೋಡ್) ಯೋಜನೆ ಜಾರಿಗೆ ಮೊದಲು ಮೇಖೀÅ ವೃತ್ತದಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆಯವರೆಗಿನ ಮಾರ್ಗದ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವಂತೆ ಬಲ್ಗೇರಿಯಾ ಮೂಲದ ಖಾಸಗಿ ಸಂಸ್ಥೆಗೆ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದ್ದಾರೆ.
ಶುಕ್ರವಾರ ಬಿಎಂಆರ್‌ಡಿಎ ಕಚೇರಿಯಲ್ಲಿ ಬಲ್ಗೇರಿಯಾದ ಐಎಎಸ್‌ಎ ವೆಸ್ಟ್ ಕನ್ಸಾರ್ಟಿಯಂ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ನಗರದಲ್ಲಿ ಯಾವ ಮಾರ್ಗಗಳಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಬಹುದು, ನಿರ್ಮಾಣದ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಅವರು ಯೋಜನೆ ಜಾರಿಗೂ ಮೊದಲು ಒಂದು ಮಾರ್ಗದಲ್ಲಿ ರಸ್ತೆ ನಿರ್ಮಾಣ ಕುರಿತು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವಂತೆ ಹೇಳಿದರಲ್ಲದೆ, ಅದರ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಯೋಜನೆ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಪ್ರತಿನಿಧಿಗಳು ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ.70 ಹಣವನ್ನು ತಾವೇ ಭರಿಸುವುದಾಗಿ ತಿಳಿಸಿದರು. ಉಳಿದ ಹಣವನ್ನು ಸರ್ಕಾರದಿಂದ ನೀಡಬೇಕು ಮತ್ತು ಸರ್ಕಾರಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ಸಮಿತಿ ರಚನೆ: ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಲು ಸಭೆಯಲ್ಲಿ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಬಿಡಿಎ ಎಂಜಿನಿಯರಿಂಗ್ ಸದಸ್ಯೆ ಪಿ.ಎನ್.ನಾಯಕ್, ಕೆಆರ್‌ಡಿಸಿಯ ಮುಖ್ಯ ಎಂಜಿನಿಯರ್ ಕೃಷ್ಣಾರೆಡ್ಡಿ ಮತ್ತು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಸಮಿತಿಯಲ್ಲಿದ್ದಾರೆ.
ಸಭೆಯಲ್ಲಿ ಸಚಿವ ರೋಷನ್ ಬೇಗ್, ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥಪ್ರಸಾದ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಇದ್ದರು.