ಬೆಳಗಾವಿ: ಕಳೆದ ಎರಡು ತಿಂಗಳಿಂದ ವಿಧಿಸಿರುವ ಲಾಕ್‌ಡೌನ್ ವೇಳೆ ಜನರಿಗೆ ಅಗತ್ಯವಾಗಿ ಬೇಕಿರುವ ವೈದ್ಯಕೀಯ ಸೇವೆ ನೀಡದೇ ಬಂದ್ ಮಾಡಿರುವ ಹಾಗೂ ರಾಜ್ಯಮಟ್ಟದ ಆ್ಯಪ್‌ನಲ್ಲಿ ದಿನಾಲೂ ಮಾಹಿತಿ ಒದಗಿಸದ ಜಿಲ್ಲೆಯ 464 ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದ್ದು, ಕಡ್ಡಾಯವಾಗಿ ಎಲ್ಲರೂ ಮಾಹಿತಿ ನೀಡಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದೆ.
ಜಿಲ್ಲೆಯಲ್ಲಿರುವ 2300 ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಸುಮಾರು 1930 ಮಾತ್ರ ದಿನನಿತ್ಯ ಈ ಸರ್ಕಾರದ ಆ್ಯಪ್‌ನಲ್ಲಿ ರೋಗಿಗಳ ಮಾಹಿತಿ ಒದಗಿಸುತ್ತಿವೆ. ಇನ್ನುಳಿದ ಕ್ಲಿನಿಕ್‌ಗಳು ಈ ಆ್ಯಪ್‌ನಲ್ಲಿ ಮಾಹಿತಿ ನೀಡದ್ದಕ್ಕೆ ನೋಟಿಸ್ ಕಳುಹಿಸಲಾಗಿದೆ.
ಪ್ರತಿ ಖಾಸಗಿ ಆಸ್ಪತ್ರೆ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ತೆರೆಯಬೇಕು. ಕಂಟೈನಮೆಂಟ್ ಪ್ರದೇಶದ ಆಸ್ಪತ್ರೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಆಸ್ಪತ್ರೆಗೆ ಬರುವ ರೋಗಿಗೆ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ ಸಂಬಂಧಿತ ಲಕ್ಷಣಗಳು ಕಂಡು ಬಂದಿದ್ದರೆ ಕೂಡಲೇ ಇದರ ಮಾಹಿತಿಯನ್ನು ಆ್ಯಪ್‌ನಲ್ಲಿ ಒದಗಿಸಬೇಕು. ರೋಗಿಗಳಿಗೆ ಚಿಕಿತ್ಸೆ ನೀಡಿದ ಪ್ರತಿ ವಿವರವನ್ನೂ ದಾಖಲಿಸುವಂತೆ ನಿರ್ದೇಶನ ನೀಡಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಕೋವಿಡ್ ಗೆ ಹೋಲುವ ಲಕ್ಷಣಗಳಿದ್ದರೆ, ತಕ್ಷಣವೇ ಅವರನ್ನು ಪತ್ತೆ ಹಚ್ಚಿ ನಿಗಾ ಇರಿಸಲು ಇದರಿಂದ ಸಾಧ್ಯವಾಗುತ್ತಿತ್ತು. ಆದರೆ ಕೆಲವರು ಮಾಹಿತಿ ಒದಗಿಸದ್ದಕ್ಕೆ ಹಾಗೂ ನಿಯಮ ಪಾಲಿಸದ್ದಕ್ಕೆ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ. ಇಂಥ ಸಾಂಕ್ರಾಮಿಕ ರೋಗಗಳು ಬಂದಾಗ ವೈದ್ಯರ ಕರ್ತವ್ಯ ಹೆಚ್ಚಿನದ್ದಾಗಿರುತ್ತದೆ. ಈಗಾಗಲೇ ವೈದ್ಯರಿಗೆ ಈ ಬಗ್ಗೆ ಅರಿವು ಇದೆ. ಆದರೂ ಸರ್ಕಾರದ ಕೆಲ ನಿಯಮಗಳನ್ನು ಪಾಲಿಸದವರಿಗೆ ತಿಳಿ ಹೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ದೃಢವಾದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೆ ಅಂಥ ಆಸ್ಪತ್ರೆಗಳನ್ನು ಸೀಲ್ ಮಾಡುವುದಿಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಹೀಗಾಗಿ ವೈದ್ಯರು ಹೆದರಬೇಕಾದ ಅಗತ್ಯವಿಲ್ಲ. ಕೇವಲ 24 ಗಂಟೆಯಲ್ಲಿ ತಮ್ಮ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿದರೆ ಮತ್ತೆ ಆಸ್ಪತ್ರೆಯನ್ನು ಆರಂಭಿಸಬಹುದಾಗಿದೆ. ತಪ್ಪು ಗ್ರಹಿಕೆಯಿಂದ ಹೊರ ಬಂದು ಎಲ್ಲರೂ ಆಸ್ಪತ್ರೆಗಳನ್ನು ಆರಂಭಿಸಿ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಡಾ| ಮುನ್ಯಾಳ ಮನವಿ ಮಾಡಿದ್ದಾರೆ.