ಬೈಲಹೊಂಗಲ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಬರ ಹಿನ್ನೆಲೆಯಲ್ಲಿ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿ ಶನಿವಾರ ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ ನಡೆಸಿದರು.
ಬರ ಪರಿಸ್ಥಿತಿಯಲ್ಲಿ ಜನರು ಗುಳೇ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಭಾಗದ ಎಲ್ಲ ಕುಟುಂಬಗಳಿಗೂ ವರ್ಷವಿಡೀ ಸರ್ಕಾರ ಉದ್ಯೋಗ ಒದಗಿಸಲಿದೆ. ಗ್ರಾಮೀಣ ಪ್ರದೇಶದಿಂದ ಗುಳೆ ಹೋಗುವುದನ್ನು ತಡೆಯಲು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಲಾಗಿದೆ. ಪ್ರತಿ ವ್ಯಕ್ತಿಗೆ 40 ಲೀಟರ್ ನೀರಿನಂತೆ ಪ್ರತಿದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಸರ್ಕಾರ ಸಮರ್ಥವಾಗಿ ಬರ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತರ ಅಹವಾಲು ಆಲಿಸಿದ ಅವರು, ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಎಂ.ಪಿ.ಮಾರುತಿ, ತಹಶೀಲ್ದಾರ್ ದೊಡ್ಡಪ್ಪ ಹೂಗಾರ ಅವರಿಗೆ ಸೂಚನೆ ನೀಡಿದರು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವಲ್ಲಿ ವಿಫಲರಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ, ಸಚಿವ ದೇಶಪಾಂಡೆಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ಕಿತ್ತೂರ ತಾಲೂಕು ಬರದಿಂದ ತತ್ತರಿಸಿದ್ದು, ಕಂದಾಯ ಇಲಾಖೆಯಿಂದ 2 ಕೋಟಿ ರೂ. ಬರ ನಿರ್ವಹಣೆಗೆ ಮಂಜೂರು ಮಾಡಿರುವುದು ಶ್ಲಾಘನೀಯ. ಗ್ರಾಮೀಣಾಭಿವೃದ್ಧಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಂಜೂರು ಮಾಡಬೇಕಾದ 2 ಕೋಟಿ ರೂ. ಅನುದಾನ ಕಿತ್ತೂರ ತಾಲೂಕಿಗೆ ಮಂಜೂರಾಗಿಲ್ಲ. ಪಂಚಾಯತ್ ರಾಜ್ ಸಚಿವರಿಗೆ ಮನವಿ ಮಾಡಿದ್ದರೂ ಮಂಜೂರಾತಿಗೆ ಆದೇಶ ಹೊರಡಿಸಿಲ್ಲ. ಕಿತ್ತೂರ ತಾಲೂಕಿನಲ್ಲಿ ಪ್ರತಿನಿತ್ಯ10 ರಿಂದ 12 ಕಿಮೀ ನೀರು ತರಲು ಕಷ್ಟ ಪಡುತ್ತಿದ್ದಾರೆ. ಕೆಲವೆಡೆ ತಾಲೂಕಾ ಆಡಳಿತದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದ್ದರಿಂದ ಬರ ನಿರ್ವಹಣೆಗೆ ಮತ್ತು ಕುಡಿಯುವ ನೀರಿಗಾಗಿ ಟಾಸ್ಕ್ಫೋರ್ಸ್ ಅಡಿ ಕಿತ್ತೂರ ತಾಲೂಕಿಗೆ ಬಿಡುಗಡೆ ಮಾಡಬೇಕಾದ 2 ಕೋಟಿ ರೂ.ಗಳನ್ನು ಸಚಿವರಿಗೆ ಮನವರಿಕೆ ಮಾಡಿ ಆದಷ್ಟು ಬೇಗ ಕಿತ್ತೂರ ತಾಲೂಕಿಗೆ ಹಣ ಬಿಡುಗಡೆ ಮಾಡಬೇಕೆಂದರು. ತಾಪಂ ಇಒ ಸಮೀರ ಮುಲ್ಲಾ, ತಾಪಂ ಸಹಾಯಕ ನಿರ್ದೇಶಕ ಸುಭಾಶ ಸಂಪಗಾವಿ, ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ರಾಚನ್ನವರ, ಮಹಾಂತೇಶ ಮೊಹರೆ, ಸೋಮಪ್ಪ ಉಪ್ಪಾರಟ್ಟಿ ಇತರರು ಇದ್ದರು.