Advertisement

ಜಿಲ್ಲಾಸ್ಪತ್ರೆ ವಿಸ್ತರಣೆಗೆ ನೀಲಿ ನಕಾಶೆ ಸಿದ್ಧಪಡಿಸಲು ಸೂಚನೆ

04:55 PM Apr 27, 2019 | Naveen |

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅತ್ಯವಶ್ಯಕವಾದ ವಿಭಾಗಗಳ ನಿರ್ಮಾಣದ ಬಗ್ಗೆ ನೀಲಿ ನಕಾಶೆಯೊಂದನ್ನು ಸಿದ್ಧಪಡಿಸಲು ಜಿಲ್ಲಾ ಸರ್ಜನ್‌ ಹಾಗೂ ಲೋಕೋಪಯೋಗಿ ಇಲಾಖೆಗೆ ಶಾಸಕ ರವಿ ಸೂಚಿಸಿದರು.

Advertisement

ಶುಕ್ರವಾರ ಜಿಲ್ಲಾ ಸರ್ಜನ್‌ ಡಾ| ಕುಮಾರ್‌ ನಾಯಕ್‌ ಹಾಗೂ ಲೋಕೋಪಯೋಗಿ ಇಲಾಖೆ ತಂತ್ರಜ್ಞರೊಂದಿಗೆ ಜಿಲ್ಲಾಸ್ಪತ್ರೆ ವಿಸ್ತರಣೆ ಬಗ್ಗೆ ಚರ್ಚಿಸಿದ ಅವರು, ರಾಜ್ಯಸರ್ಕಾರ ಆಯವ್ಯಯದಲ್ಲಿ ಆಸ್ಪತ್ರೆ ಉನ್ನತೀಕರಣಕ್ಕೆ 50 ಕೋಟಿ ರೂ. ಹಣ ಮೀಸಲಿಟ್ಟಿದ್ದು, ಆ ಹಣ ಬಳಸಿಕೊಂಡು ಆಸ್ಪತ್ರೆಯಲ್ಲಿ ಅತ್ಯವಶ್ಯಕವಾದ ಘಟಕ ಮೊದಲ ಹಂತದಲ್ಲಿ ನಿರ್ಮಿಸಬೇಕು. ಮುಂದಿನ ಹಂತಗಳಲ್ಲಿ ಆಸ್ಪತ್ರೆಯ ಆವರಣದಲ್ಲಿ ಎಲ್ಲೆಲ್ಲಿ ವಿಸ್ತರಣೆ ಮಾಡಬಹುದೆಂದು ಈಗಲೇ ಸ್ಥಳವನ್ನು ಗುರುತಿಸಿಕೊಂಡರೆ ಒಳ್ಳೆಯದು ಎಂದರು.

ಸಾರ್ವಜನಿಕ ಆಸ್ಪತ್ರೆ ಒಟ್ಟು 10 ಎಕರೆ ಸ್ಥಳಾವಕಾಶ ಹೊಂದಿದೆ. ಈಗಾಗಲೇ ಅಲ್ಲಿ ಯೋಜನಾಬದ್ಧವಾಗಿ ಕಟ್ಟಡಗಳನ್ನು ನಿರ್ಮಿಸದೆ ಇರುವುದರಿಂದ ಹೊಸದಾಗಿ ಕಟ್ಟಡ ನಿರ್ಮಿಸಲು ಖಾಲಿ ಜಾಗವಿಲ್ಲ. ಈ ಹಿನ್ನೆಲೆಯಲ್ಲಿ ಮುಂಭಾಗದ ದಾನಿಗಳ ನೆರವಿನಿಂದ ನಿರ್ಮಿಸಿರುವ ಕಟ್ಟಡವನ್ನು ಹಾಗೆ ಉಳಿಸಿಕೊಂಡು ಉಳಿದ ಕಡೆ ಇರುವ ಹಳೆಯ ಕಟ್ಟಡ ಕೆಡವಿ ಬಹುಮಹಡಿ ಕಟ್ಟಡ ನಿರ್ಮಿಸುವ ಮೂಲಕ ಈ ಆಸ್ಪತ್ರೆಯನ್ನು ಕನಿಷ್ಠ 600 ರಿಂದ 1000 ಹಾಸಿಗೆಗಳ ಆಸ್ಪತ್ರೆಯನ್ನಾಗಿ ನಿರ್ಮಿಸಬೇಕಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಈಗಲೇ ಅಲ್ಲಿರುವ ಹಳೆಯ ಕಟ್ಟಡಗಳು, ಉಪಯೋಗಿಸದೆ ಇರುವ ವೈದ್ಯರ ವಸತಿ ಗೃಹ ಹಾಗೂ ಹೆರಿಗೆ ಆಸ್ಪತ್ರೆ ಆವರಣದಲ್ಲಿರುವ ವಸತಿ ಗೃಹಗಳ ಜಾಗದಲ್ಲಿ ಆಸ್ಪತ್ರೆ ವಿಸ್ತರಣಾ ಕಾರ್ಯ ಕೈಗೊಳ್ಳಬಹುದಾಗಿದೆ. ಇವುಗಳನ್ನು ಗಮನದಲ್ಲಿರಿಸಿಕೊಂಡು ನೀಲಿ ನಕಾಶೆ ಸಿದ್ಧಪಡಿಸಿಟ್ಟರೆ ಮುಂದೆ ಈ ಬಗ್ಗೆ ಚರ್ಚಿಸಿ ಆಸ್ಪತ್ರೆ ಉನ್ನತೀಕರಣದ ಬಗ್ಗೆ ಯೋಚಿಸಬಹುದೆಂದು ಹೇಳಿದರು.

ಜಿಲ್ಲಾಸ್ಪತ್ರೆಗೆ ಒತ್ತಿಕೊಂಡಿರುವ ನ್ಯಾಯಾಧೀಶರ ಗೃಹಗಳಿರುವ ಸ್ಥಳವನ್ನು ಆಸ್ಪತ್ರೆ ವಿಸ್ತರಣೆಗೆ ಬಳಸಿಕೊಳ್ಳಬಹುದು. ಸದ್ಯದಲ್ಲೆ ಜಿಲ್ಲಾ ಪಂಚಾಯತ್‌ ಕಚೇರಿ ಬಳಿ ನಿರ್ಮಿಸುತ್ತಿರುವ ನ್ಯಾಯಾಲಯ ಸಂಕೀರ್ಣದ ಹತ್ತಿರ ಹೊಸದಾಗಿ ನ್ಯಾಯಾಧೀಶರಿಗೆ ವಸತಿ ಗೃಹಗಳನ್ನು ನಿರ್ಮಿಸುತ್ತಿರುವುದರಿಂದ ಈ ಜಾಗವನ್ನು ಆಸ್ಪತ್ರೆ ವಿಸ್ತರಣೆಗೆ ಉಪಯೋಗಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹ ಸ್ಥಳಾಂತರಗೊಳ್ಳುವುದರಿಂದ ಆ ಆವರಣ ಬಳಸಿಕೊಳ್ಳಲು ಅವಕಾಶವಿದೆ ಎಂದರು.

Advertisement

ಇವುಗಳನ್ನು ಪರಿಗಣಿಸಿ ಆಸ್ಪತ್ರೆ ವಿಸ್ತರಣೆ ಬಗ್ಗೆ ನೀಲಿನಕಾಶೆ ತಯಾರಿಸಬೇಕಾಗಿದೆ. ಯಾವ ವಿಭಾಗವನ್ನು ಎಲ್ಲಿ ನಿರ್ಮಿಸಬಹುದು ಎಂಬುದನ್ನು ಈಗಲೇ ಯೋಚಿಸಿ ಸ್ಥಳ ಗುರುತಿಸುವುದು ಅಗತ್ಯ ಎಂದು ಹೇಳಿದರು.

ಬಹುಮುಖ್ಯವಾಗಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ತೀರಾ ಕಿಷ್ಕಿಂದವಾಗಿದ್ದು, ರೋಗಿಗಳು ಬಂದರೆ ನಿಲ್ಲಲು ಜಾಗವಿಲ್ಲ. ಹಾಗಾಗಿ ಆ ವಿಭಾಗವನ್ನು ವಿಶಾಲವಾಗಿ ಬಂದ ರೋಗಿಗಳು ತಮ್ಮ ಸರದಿ ಬರುವವರೆಗೂ ಕುಳಿತುಕೊಂಡಿರುವಂತೆ ನಿರ್ಮಾಣ ಮಾಡಬೇಕಾಗಿದೆ. ಒಂದೇ ಕಡೆ ವಿವಿಧ ತಜ್ಞ ವೈದ್ಯರು ಹೊರರೋಗಿಗಳನ್ನು ನೋಡುವಂತೆ ಆ ವಿಭಾಗವನ್ನು ನಿರ್ಮಾಣ ಮಾಡಬೇಕಾಗಿದೆ. ಇದೇ ರೀತಿ ಹೆರಿಗೆ ಆಸ್ಪತ್ರೆ ನವೀಕರಣ, ಜೊತೆಗೆ ಮೂಳೆ ತಜ್ಞ ವೈದ್ಯರ ವಿಭಾಗ ಸೇರಿದಂತೆ ಒಳರೋಗಿಗಳ ವಿಭಾಗವನ್ನು ಯಾವ ರೀತಿ ನವೀಕರಿಸಬಹುದು ಅಥವಾ ಹೊಸದಾಗಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಬಹುದೆಂಬುದನ್ನು ಆಲೋಚಿಸಬೇಕಾಗಿದೆ ಎಂದರು.

ತಾವು ಮತ್ತು ಜಿಲ್ಲಾಧಿಕಾರಿಗಳು ಭಾನುವಾರ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿ ಪೂರ್ಣವಾಗಿ ಪರಿಶೀಲಿಸಲಿದ್ದು, ಆ ವೇಳೆಗೆ ವಿಸ್ತರಣೆ ಬಗ್ಗೆ ವರದಿಯೊಂದನ್ನು ತಯಾರಿಸಿ ಇಟ್ಟುಕೊಂಡಿದ್ದರೆ ಒಳ್ಳೆಯದೆಂದು ಹೇಳಿದರು.

ಇತ್ತೀಚೆಗೆ ಈ ಬಗ್ಗೆ ತಾವು ಬೆಂಗಳೂರಿನಲ್ಲಿ ಸಂಬಂಧಿಸಿದ ಕಾರ್ಯದರ್ಶಿಗಳೊಡನೆ ಚರ್ಚಿಸಿದ್ದು, ಅವರೂ ಸಹ ಸದ್ಯದಲ್ಲೆ ಕಟ್ಟಡ ನಿರ್ಮಾಣದ ಬಗ್ಗೆ ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಸುವ ಭರವಸೆ ಇತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next