Advertisement

ಪ್ರಜ್ವಲ್‌ಗ‌ಲ್ಲ ಪ್ರಣಾಮ್‌ಗೆ ನೋಟಿಸ್‌!

11:59 AM Oct 03, 2017 | Team Udayavani |

ಬೆಂಗಳೂರು: ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವಲು ಮೊಮ್ಮಗ ಗೀತಾವಿಷ್ಣು ಕಾರು ಅಪಘಾತ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಘಟನೆ ನಡೆದಾಗ ನಟ ಪ್ರಜ್ವಲ್‌ ದೇವರಾಜ್‌ ಇದ್ದರು ಎನ್ನಲಾಗಿತ್ತು. ಆದರೆ, ಪೊಲೀಸರ ತನಿಖೆಯ ಪ್ರಕಾರ ವಿಷ್ಣು ಅಪಘಾತ ನಡೆಸಿದ್ದ ಕಾರಿನಲ್ಲಿ ಪ್ರಜ್ವಲ್‌ ದೇವರಾಜ್‌ ಅಲ್ಲ, ಇವರ ಸಹೋದರ ಪ್ರಣಾಮ್‌ ದೇವರಾಜ್‌ ಇದ್ದರು ಎಂದು ತಿಳಿದು ಬಂದಿದೆ.

Advertisement

ಈ ಹಿನ್ನೆಲೆಯಲ್ಲಿ ವಿಷ್ಣು ಸ್ನೇಹಿತರಾದ ಪ್ರಣಾಮ್‌ ದೇವರಾಜ್‌, ವಿಷ್ಣು ಸಹೋದರ ಆದಿ ಶ್ರೀನಿವಾಸ್‌, ವಿಷ್ಣು ಸ್ನೇಹಿತರಾದ ಶಶಾಂಕ್‌, ಫೈಜಲ್‌, ಜುನೈದ್‌, ವಿನೋದ್‌ ಸೇರಿದಂತೆ 6 ಮಂದಿಗೆ ನೋಟಿಸ್‌ ನೀಡಲಾಗಿತ್ತು. ಈ ಪೈಕಿ ಪ್ರಣಾಮ್‌ ದೇವರಾಜ್‌, ಶಶಾಂಕ್‌, ಫೈಜಲ್‌ ಸೋಮವಾರ ಜಯನಗರ ಪೊಲೀಸ್‌ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

ಆದರೆ, ಘಟನೆ ದಿನ ಸ್ಥಳೀಯರು ಆರೋಪಿಸುವ ಪ್ರಕಾರ, ಕಾರಿನಲ್ಲಿ ನಟ ಪ್ರಜ್ವಲ್‌ ದೇವರಾಜ್‌ ಹಾಗೂ ದಿಗಂತ್‌ ಇದ್ದರು ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಈ ಬಗ್ಗೆ ಇದುವರೆಗೂ ಯಾವುದೇ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿಲ್ಲ. ಹೀಗಾಗಿ ನಟರಾದ ಪ್ರಜ್ವಲ್‌ ದೇವರಾಜ್‌ ಹಾಗೂ ದಿಗಂತ್‌ಗೆ ನೋಟಿಸ್‌ ನೀಡಿಲ್ಲ.

ಅಂದು ವಿಷ್ಣು ಜತೆ ಇದ್ದದ್ದು ನಟ ದೇವರಾಜ್‌ ಅವರ ಎರಡನೆ ಪುತ್ರ ಪ್ರಣಾಮ್‌ ದೇವರಾಜ್‌ ಇತರರು ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ,  ಘಟನೆಗೂ ಮೊದಲು ಈಡನ್‌ ಪಾರ್ಕ್‌ ಹೋಟೆಲ್‌ನಲ್ಲಿ ಮಾಡಿರುವುದು, ಹೋಟೆಲ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ ಶರಣಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.

ಘಟನೆಗೂ ಮೊದಲು ಪಾರ್ಟಿ ಮಾಡಿದ್ದೆವು: “ಕಾರು ಅಪಘಾತಕ್ಕೂ ಮೊದಲು ವಿಷ್ಣು ಮಾಲೀಕತ್ವದ ಈಡನ್‌ ಪಾರ್ಕ್‌ ಹೋಟೆಲ್‌ನಲ್ಲಿ ಎಲ್ಲ ಸ್ನೇಹಿತರು ಪಾರ್ಟಿ ಮಾಡಿದ್ದೆವು. ಬಳಿಕ ಸ್ನೇಹಿತರೊಬ್ಬರ ಮನೆಗೆ ಹೋಗಿ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದೆವು. ಅನಂತರ ಸ್ನೇಹಿತರೊಬ್ಬರು ಕರೆ ಮಾಡಿ ವಿಷ್ಣು ಕಾರು ಅಪಘಾತವಾಗಿದೆ ಎಂದು ಮಾಹಿತಿ ನೀಡಿದರು. ಆಗ ಕೂಡಲೇ ಸ್ಥಳಕ್ಕೆ ಬಂದೆವು. ಕಾರು ಅಪಘಾತ ಸಂದರ್ಭದಲ್ಲಿ ನಾವು ಇರಲಿಲ್ಲ. ಇನ್ನು ಮಾದಕ ವಸ್ತು ಸೇವನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಮೂವರು ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ವಿಷ್ಣು ವಿರುದ್ಧ ಮತ್ತೂಂದು ದೂರು: ಇನ್ನು ಮದ್ಯದ ಅಮಲಿನಲ್ಲಿ ಸೌತ್‌ ಎಂಡ್‌ ವೃತ್ತದ ಮಾದರಿ ಪಾದಚಾರಿ ಮಾರ್ಗದ ಮೇಲೆ ಹರಿದ ಕಾರು ಸುಮಾರು 25 ಅಡಿ ಪಾದಚಾರಿ ಮಾರ್ಗವನ್ನು ಹಾಳು ಮಾಡಿದೆ. ನಾಮಫ‌ಲಕವನ್ನು ಧ್ವಂಸಗೊಳಿಸಿದೆ ಎಂದು ಆರೋಪಿ ವಿಷ್ಣು ವಿರುದ್ಧ ಯಡಿಯೂರು ವಾರ್ಡ್‌ ಎಂಜಿನಿಯರ್‌ ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಈ ಅವಘಡದಿಂದ ಪಾಲಿಕೆಗೆ ಸುಮಾರು 5 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಹೊರರಾಜ್ಯಕ್ಕೆ ತನಿಖಾ ತಂಡ: ಗೀತಾವಿಷ್ಣು ಕಾರು ಅಪಘಾತ ಸಂಭವಿಸಿದಾಗ ಬೆಂಝ್ ಕಾರಿನಲ್ಲಿ ದೊರೆತ ಡ್ರಗ್ಸ್‌ ಜಾಲವನ್ನು ಬೇಧಿಸಲು ಮುಂದಾಗಿದ್ದೇವೆ ಹಾಗೂ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ವಿಷ್ಣು ಬಂಧನಕ್ಕೂ ಕ್ರಮ ಕೈಗೊಂಡಿದ್ದೇವೆ. ವಿಷ್ಣು ತನ್ನ ಸಹೋದರಿಯ ಜತೆ ಆಗಾಗ್ಗೆ ಸ್ಥಳವನ್ನು ಬದಲಾಯಿಸುತ್ತಿದ್ದಾನೆ. ಹೀಗಾಗಿ ಎಸಿಪಿ ನೇತೃತ್ವದ ಎರಡು ತಂಡಗಳು ಸೀಮಾಂಧ್ರ ಮತ್ತು ತೆಲಂಗಾಣದಲ್ಲಿ ಬಿಡು  ಬಿಟ್ಟಿವೆ. ಹಾಗೆಯೇ ಕಾರಿನಲ್ಲಿ ದೊರೆತ ಮಾದಕ ವಸ್ತು ಎಲ್ಲಿಂದ ಸರಬರಾಜು ಆಗಿತ್ತು. ಈ ದಂಧೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಷ್ಣು ಎಸ್ಕೇಪ್‌ಗೆ ಸಹಕರಿಸಿದವನ ಬಂಧನ: ಮಲ್ಯ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ವಿಷ್ಣು ಸಹೋದರಿ ಚೈತನ್ಯಾ ಜತೆಗೆ ಕೆಲಸ ಮಾಡುತ್ತಿದ್ದ ಶಿವಕುಮಾರ್‌ನನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ವಿಷ್ಣು ಮತ್ತು ಆಕೆಯ ಸಹೋದರಿ ಬಂಧನಕ್ಕೆ ವಿಶೇಷ ಪೊಲೀಸ್‌ ತಂಡ ಹೈದರಾಬಾದ್‌ಗೆ ಹೋಗಿದೆ. ಆದರೆ, ಆರೋಪಿಗಳು ತಮಿಳುನಾಡಿನ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನನಗೆ ವಿಷ್ಣು ಪರಿಚಯ ಇದೆ. ಆತನ ಕಾರು ಅಪಘಾತವಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಬಂದೆವು. ಆದರೆ ಘಟನೆ ವೇಳೆ ನಾನು ಇರಲಿಲ್ಲ. ಮತ್ತೂಮ್ಮೆ ವಿಚಾರಣೆಗೆ ಕರೆದರೂ ಹೋಗುತ್ತೇನೆ.
-ಪ್ರಣಾಮ್‌ ದೇವರಾಜ್‌, ನಟ ದೇವರಾಜ್‌ ಪುತ್ರ

Advertisement

Udayavani is now on Telegram. Click here to join our channel and stay updated with the latest news.

Next