ಬೆಂಗಳೂರು: ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಕುರಿತು ನೀಡಿದ್ದ ಹೇಳಿಕೆಗೆ ಪ್ರಜ್ವಲ್ ರೇವಣ್ಣ ಅವರು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಕ್ಷಮೆ ಯಾಚಿಸುವುದರೊಂದಿಗೆ ವಿವಾದಕ್ಕೆ ತೆರೆ ಎಳೆಯಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮುಂದಾಗಿದ್ದಾರೆ.
ಈಗಾಗಲೇ ಪ್ರಜ್ವಲ್ ರೇವಣ್ಣನನ್ನು ಕರೆಸಿ ಮಾತನಾಡಿದ್ದೇನೆ. ಆತ ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾನೆ. ಕುಮಾರಸ್ವಾಮಿ ಬಳಿ ಕ್ಷಮೆ ಕೇಳು ಎಂದು ಆತನಿಗೆ ಸೂಚಿಸಿದ್ದೇನೆ. ಕ್ಷಮೆ ಯಾಚಿಸಿದ ಬಳಿಕ ಪ್ರಕರಣಕ್ಕೆ ತೆರೆ ಎಳೆಯಲಾಗುವುದು ಎಂದು ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಹೇಳಿಕೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ. ಆತನನ್ನು ಕರೆಸಿ ಸುಮಾರು ಎರಡು ಗಂಟೆ ಮಾತನಾಡಿದ್ದೇನೆ. ನಾನು ತಪ್ಪು ಒಪ್ಪಿಕೊಳ್ಳುತ್ತೇನೆ. ನನಗೆ ನೋಟಿಸ್ ಕೊಡಿ. ಉತ್ತರ ಕೊಡುವ ಮೂಲಕ ಕ್ಷಮೆ ಯಾಚಿಸುತ್ತೇನೆ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ, ನಾನು ಪತ್ರ ಬರೆಯುತ್ತಿದ್ದು, ಅದನ್ನು ನೋಟಿಸ್ ಎಂದು ತಿಳಿದು ಉತ್ತರಿಸು. ಅದಕ್ಕಿಂತ ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಬಳಿ ತೆರಳಿ ಕ್ಷಮೆ ಕೇಳುವಂತೆ ಸೂಚಿಸಿದ್ದೇನೆ. ಅಲ್ಲಿಗೆ ವಿವಾದ ಮುಗಿಯಲಿದೆ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯುವ ಸ್ನೇಹಿತರನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೆ. ಆದರೆ, ನಾವ್ಯಾರೂ ಆ ಬಗ್ಗೆ ಚಕಾರ ಎತ್ತಿರಲಿಲ್ಲ. ಆದರೆ, ನಿನ್ನೊಂದಿಗೆ ಇದ್ದ ಸ್ನೇಹಿತರೇ ಘಟನೆ ನಡೆದ ಬಳಿಕ ನಿನ್ನ ಬಗ್ಗೆ ಏನು ಮಾತಾಡುತ್ತಿದ್ದಾರೆ? ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ನಿನ್ನ ಕುರಿತು ಏನೆಲ್ಲಾ ಬರೆಯುತ್ತಿದ್ದಾರೆ ಎಂದು ಗೊತ್ತಿದೆಯೇ? ಇದರಿಂದ ನಿನ್ನ ಯುವ ನಾಯಕತ್ವಕ್ಕೆ ಪೆಟ್ಟು ಬಿದ್ದಿದೆ ಎಂದು ಬುದ್ದಿಮಾತು ಹೇಳಿದಾಗ ಪ್ರಜ್ವಲ್ ರೇವಣ್ಣನಿಗೆ ತನ್ನ ತಪ್ಪು ಮನವರಿಕೆಯಾಗಿ ಕ್ಷಮೆ ಕೇಳುವುದಾಗಿ ಹೇಳಿದ್ದಾನೆ. ಹೀಗಿರುವಾಗ ವಿವಾದ ಮುಂದುವರಿಸಿ ಗೊಂದಲ ಹೆಚ್ಚಿಸುವುದು ಸರಿಯಲ್ಲ ಎಂದರು.
ಕುಮಾರಸ್ವಾಮಿಯದ್ದೇ ಚುನಾವಣೆ ನೇತೃತ್ವ: ಪ್ರಜ್ವಲ್ ರೇವಣ್ಣ ಹೇಳಿಕೆಯಿಂದ ಬೇಸರಗೊಂಡು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದಲೇ ಹಿಂದೆ ಸರಿಯುತ್ತೇನೆ ಎಂದು ಕುಮಾರಸ್ವಾಮಿ ಹೇಳಿರಬಹುದು. ಆದರೆ, ಇದು ಬೇಸರದ ಹೇಳಿಕೆಯೇ ಹೊರತು ಖಡಾಖಂಡಿತ ಹೇಳಿಕೆ ಅಲ್ಲ. ಮುಂದಿನ ವಿಧಾನಸಭೆ ಚುನಾವಣೆಯನ್ನು ಕುಮಾರಸ್ವಾಮಿ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದೊಂದಿಗೇ ಪಕ್ಷ ಎದುರಿಸಲಿದೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಈಗಿನ ರಾಜಕೀಯ ವ್ಯವಸ್ಥೆಯೇ ಕೆಟ್ಟುಹೋಗಿದೆ. ಸೂಟ್‌ಕೇಸ್ ಸಂಸ್ಕೃತಿ ಕಾಂಗ್ರೆಸ್, ಬಿಜೆಪಿಯಂತಹ ಪಕ್ಷಗಳಲ್ಲಿ ಇರಬಹುದು. ಬಿಜೆಪಿಯ ಅನಂತಕುಮಾರ್ ಮತ್ತು ಯಡಿಯೂರಪ್ಪ ಅವರು ಸೂಟ್‌ಕೇಸ್ ಬಗ್ಗೆ ಮಾತನಾಡಿದ್ದನ್ನು ಕೇಳಿಲ್ಲವೇ? ಅಷ್ಟಕ್ಕೂ ನಮಗೆ ಸೂಟ್‌ಕೇಸ್ ಕೊಡುವವರು ಯಾರು? ಕೊಡುವವರಿದ್ದರೆ ತಾನೆ ತೆಗೆದುಕೊಳ್ಳುವ ಮಾತು.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ