ಕೊಲೊಂಬೋ: ಶ್ರೀಲಂಕಾದ ಈಸ್ಟರ್ ರವಿವಾರ ದಾಳಿಯ ಅನಂತರ ಇನ್ನಷ್ಟು ದಾಳಿ ನಡೆಯುವ ಸಾಧ್ಯತೆಯಿದ್ದು, ಗಣ್ಯರು ಹಾಗೂ ರಾಜಕಾರಣಿಗಳು ಗುಂಪಾಗಿ ಪ್ರಯಾಣ ಕೈಗೊಳ್ಳದಂತೆ ಶ್ರೀಲಂಕಾ ಗುಪ್ತಚರ ದಳ ಮುನ್ನೆಚ್ಚರಿಕೆ ನೀಡಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ಪ್ರಧಾನಿ ರಣಿಲ್ ವಿಕ್ರಮಸಿಂಘೆ ಮತ್ತು ವಿಪಕ್ಷ ನಾಯಕ ಮಹಿಂದಾ ರಾಜಪಕ್ಸೆಗೆ ಎಚ್ಚರಿಕೆ ನೀಡಲಾಗಿದೆ. ಚರ್ಚ್‌ಗಳು, ದೇವಸ್ಥಾನ ಮತ್ತು ಮಸೀದಿಗಳಂತಹ ಧಾರ್ಮಿಕ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಹೋಗಕೂಡದು.
ಹೋಗಲೇಬೇಕಾದ ಸ್ಥಳಕ್ಕೆ ತೆರಳಲು ಹೆಲಿಕಾಪ್ಟರ್‌ಗಳನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
ಇನ್ನೊಂದೆಡೆ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಬೋಧನೆಯಲ್ಲಿ ತೊಡಗಿರುವ 800 ವಿದೇಶಿ ಮೌಲ್ವಿಗಳನ್ನು ಗಡಿಪಾರು ಮಾಡುವಂತೆ ಲಂಕಾ ಸರಕಾರಕ್ಕೆ ಪೊಲೀಸರು ಸೂಚಿಸಿದ್ದಾರೆ. ಇನ್ನೊಂದೆಡೆ ಮದರಸಾ ಶಿಕ್ಷಣ ನಿಯಂತ್ರಿಸಲು ನಿರ್ಧರಿಸಿರುವುದಾಗಿ ಶಿಕ್ಷಣ ಸಚಿವೆ ಅಕಿಲಾ ವಿರಾಜ್ ಕರಿಯವಸಂ ಹೇಳಿದ್ದಾರೆ. ಈ ಮಧ್ಯೆ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಮಿತಿ 6 ರಂದು ವರದಿ ನೀಡಲಿದೆ.
ಝಾಕಿರ್ ನಾಯ್ಕ ಟಿವಿ ಬಂದ್: ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ ಒಡೆತನದ ಪೀಸ್ ಟಿವಿ ಪ್ರಸಾರ ಮಾಡದಿರಲು ಶ್ರೀಲಂಕಾದ ಪ್ರಮುಖ ಎರಡು ಕೇಬಲ್ ಟಿವಿ ಆಪರೇಟರ್‌ಗಳು ನಿರ್ಧರಿಸಿವೆ. ಈಗಾಗಲೇ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಈ ಟಿವಿ ನಿಷೇಧಿಸಲಾಗಿದೆ.
ನಮ್ಮನ್ನು ಬಿಟ್ಟುಬಿಡಿ ಎಂದ ಸಿರಿಸೇನಾ: ರಂಜಾನ್ ಮಾಸ ಸೋಮವಾರದಿಂದ ಆರಂಭವಾಗುವ ಮುನ್ನ ಮತ್ತೂಂದು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾ ಗುಪ್ತಚರ ಮೂಲಗಳು ತಿಳಿಸಿರುವ ಹಿನ್ನೆಲೆಯಲ್ಲಿ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಮ್ಮ ದೇಶವನ್ನು ಬಿಟ್ಟುಬಿಡಿ ಎಂದು ಉಗ್ರರನ್ನು ಕೋರಿದ್ದಾರೆ.
ವಿದೇಶಿ ಶಕ್ತಿಗಳು ಈಸ್ಟರ್ ಸಂಡೆ ಬಾಂಬ್ ದಾಳಿಯನ್ನು ಯೋಜಿಸಿರಬಹುದು. ಇಸ್ಲಾಮಿಕ್ ಸ್ಟೇಟ್ ಉಗ್ರರು ಸಣ್ಣ ದೇಶವನ್ನು ಟಾರ್ಗೆಟ್ ಮಾಡುವ ಕಾರ್ಯತಂತ್ರ ಬಳಸಿರಬಹುದು ಎಂದು ಊಹಿಸಿದ್ದಾರೆ. ವಿದೇಶಕ್ಕೆ ತೆರಳಿ ತರಬೇತಿ ಪಡೆದ ಸಣ್ಣ ಗುಂಪೊಂದು ಇಂತಹ ದುಷ್ಕೃತ್ಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.