ಕಾರವಾರ: ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ 125 ಹಳೆಯ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸುವಂತೆ ನಗರಸಭೆ ಮಾಲೀಕರಿಗೆ ನೋಟಿಸ್ ನೀಡಿದೆ. ಅಲ್ಲದೇ ನಿಯಮ ಬಾಹಿರವಾಗಿ ಬಹುಮಹಡಿ ಕಟ್ಟುತ್ತಿರುವ ಕನ್‌ಸ್ಟ್ರಕ್ಷನ್ ಕಂಪನಿಗಳ ಎಂಜಿನಿಯರ್‌ಗಳಿಗೂ ನಗರಸಭೆ ನೋಟಿಸ್ ಜಾರಿ ಮಾಡಿದ್ದು, ನೀಲ ನಕಾಶೆಯಲ್ಲಿ ತೋರಿಸಿದಂತೆ ಕಟ್ಟಡ ನಿರ್ಮಿಸಿ ಎಂದು ತಾಕೀತು ಮಾಡಿದೆ.
ಹಳೆ ಕಟ್ಟಡಗಳ ಪೈಕಿ ಕುಸಿಯುವ ಹಂತದಲ್ಲಿರುವ ಗೋವರ್ಧನ ಲಾಡ್ಜ್ನ್ನು ತೆರವು ಮಾಡುವಂತೆ ನೋಟಿಸ್ ನೀಡಲಾಗಿದೆ. ನಗರದ ಹೃದಯ ಭಾಗದ ಅಶೋಕ್ ಲಾಡ್ಜ್ಗೂ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅದನ್ನು ತೆರವುಗೊಳಿಸಿ ಎಂದು ನಗರಸಭೆ ಎಚ್ಚರಿಕೆ ನೀಡಿದೆ. ಗೋವರ್ಧನ ಮತ್ತು ಅಶೋಕ ಲಾಡ್ಜ್ಗಳು ಎರಡು ದಶಕಗಳ ಹಿಂದೆ ಕಾರವಾರದ ಸುಪ್ರಸಿದ್ಧ ಲಾಡ್ಜ್ಗಳಾಗಿದ್ದವು. ನಗರದಲ್ಲಿ 125 ಹಳೆಯ ಕಟ್ಟಡಗಳ ಪೈಕಿ 117 ಕಟ್ಟಡಗಳು ನಗರದ ಗಾಂಧಿಮಾರ್ಕೆಟ್ ಪ್ರದೇಶದಲ್ಲಿದ್ದು, ಅವು ನಗರಸಭೆಯ ಒಡೆತನಕ್ಕೆ ಸೇರಿವೆ. ಹಾಗಾಗಿ ಅಲ್ಲಿ ಲೀಜ್ ಮೇಲೆ ಇರುವವರನ್ನು ಎಬ್ಬಿಸಿ ಕಟ್ಟಡ ತೆರವು ಮಾಡಬೇಕಿದೆ. ಗಾಂಧಿ ಮಾರ್ಕೆಟ್ ಮತ್ತು ಸಂಡೇ ಮಾರ್ಕೆಟ್‌ನ ನಗರಸಭೆ ಮಾಲೀಕತ್ವದ ಮಳಿಗೆಗಳನ್ನು ಲೀಜ್ ಆಧಾರದಲ್ಲಿ ಬಾಡಿಗೆ ಪಡೆದವರು ಮತ್ತು ಅದರಲ್ಲಿ ಸಬ್ ಲೀಜ್ ಮೇಲೆ ಬಾಡಿಗೆ ಇರುವವರು ಮಳಿಗೆಗಳನ್ನು ಖಾಲಿ ಮಾಡಿಸದಂತೆ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ತೀವ್ರವಾಗಿ ಸುರಿಯುತ್ತಿರುವ ಮಳೆಯಿಂದ ಬಸ್ ನಿಲ್ದಾಣದ ಬಳಿ ಹಳೆಯ ಕಟ್ಟಡ ಈವರೆಗೆ ಕುಸಿದದ್ದೇ, ಜಾಗೃತವಾಗಿ ನಗರಸಭೆ ನಗರದ ಹಳೆಯ ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964 ಸೆಕ್ಷನ್ 229ರ ಅನ್ವಯ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಹಳೆಯ ಕಟ್ಟಡಗಳನ್ನು ಅನೈತಿಕ ಚಟುವಟಿಕೆಗೆ ಬಳಸುವ ಸಾಧ್ಯತೆಗಳಿವೆ. ಸ್ವಚ್ಛತೆಯನ್ನು ಕಟ್ಟಡದ ಒಳಗೆ ಹೊರಗೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಕುಸಿದು ಬೀಳುವ ಸ್ಥಿತಿಯಲ್ಲಿ ಕಟ್ಟಡ ಅಪಾಯದ ಅಂಚು ತಲುಪಿದ್ದರೆ, ವಾಸಕ್ಕೆ ಯೋಗ್ಯವಿಲ್ಲದಿದ್ದರೆ ಕಟ್ಟಡದ ಮಾಲೀಕರು ತೆರವು ಮಾಡಬೇಕು. ಮಾಲೀಕರಿಂದ ಸಾಧ್ಯವಿಲ್ಲ ಎಂದಾದರೆ ನಗರಸಭೆ ಹಳೆಯ ಕಟ್ಟಡ ತೆರವು ಮಾಡುತ್ತದೆ. ಅದರ ವೆಚ್ಚವನ್ನು ಕಟ್ಟಡದ ಮಾಲೀಕರು ತೆರಿಗೆ ಕಟ್ಟಲು ಬಂದಾಗ ವಸೂಲಿ ಮಾಡಲಾಗುತ್ತದೆ ಎಂದು ನಗರಸಭೆ ಮೂಲಗಳು ಹೇಳಿವೆ.
ನಿಯಮ ಬಾಹಿರ ಕಟ್ಟಡ:ನಗರದಲ್ಲಿ ಬಹುಮಹಡಿ ಕಟ್ಟಡ ಕಟ್ಟುವಾಗ ಒಂದು ಮಹಡಿ ಹೆಚ್ಚುವರಿಯಾಗಿ ಕಟ್ಟುವುದು ಫ್ಯಾಶನ್ ಆಗಿದೆ. ನಂತರ ದಂಡ ತುಂಬಿ ಅದನ್ನು ಲೀಗಲೈಜ್ ಮಾಡಿಕೊಳ್ಳಲಾಗುತ್ತದೆ. ಇದನ್ನು ತಡೆಯಲು ಬಹುಮಹಡಿ ಕಟ್ಟಡ ಕಟ್ಟುವ ಕಂಪನಿಗಳು ನೀಲ ನಕಾಶೆ ಉಲ್ಲಂಘಿಸದಂತೆ ನಗರಸಭೆ ಎಚ್ಚರಿಸಿದೆ. ಉಲ್ಲಂಘಿಸಿದರೆ ಕಟ್ಟಡ ನಿರ್ಮಾಣ ಸಂಸ್ಥೆಯ ಮತ್ತು ಅಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳ ಪರವಾನಗಿ ರದ್ದು ಮಾಡಬಹುದು. ಕರ್ನಾಟಕ ನಗರ ಮುನ್ಸಪಲ್ ಮಾದರಿ ಕಟ್ಟಡಗಳ ಬೈಲಾ 1979ರಲ್ಲಿನ ಬೈಲಾ ನಂ. 22 ಪ್ರಕಾರ ಅನುಮೋದಿತ ನಕ್ಷೆ ಉಲ್ಲಂಘಿಸಿದರೆ, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರ ಅಥವಾ ಕಟ್ಟಡ ಮೇಲ್ವಿಚಾರಕರನ್ನು ಪ್ರಸ್ತುತ ನಗರದಲ್ಲಿ ಯಾವುದೇ ರೀತಿಯ ಗುತ್ತಿಗೆ ವ್ಯವಹಾರ, ಪ್ರಾಕ್ಟೀಸ್ ಮಾಡದಂತೆ ನಿರ್ಬಂಧಿಸಬಹುದಾಗಿದೆ. ಕಾರವಾರ ನಗರಸಭೆಗೆ ಕಟ್ಟಡ ನಿರ್ಮಾಣದ ಅಫಿಡೆವಿಟ್ ನೀಡಿದಂತೆ ಕಟ್ಟಡ ನಿರ್ಮಿಸಬೇಕು. ಇಲ್ಲದೇ ಹೋದರೆ ನಿಯಮ ಮೀರಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೌರಾಯುಕ್ತರು ಬಹುಮಹಡಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಹಾಗೂ ಕಟ್ಟಡ ನಿರ್ಮಾಣ ಸಲಹೆಗಾರರಿಗೆ ನೀಡಿದ ನೋಟಿಸ್‌ನಲ್ಲಿ ವಿವರಿಸಿದ್ದಾರೆ.
ನಗರಸಭೆ ಹೊಸ ನೋಟಿಸ್‌ಗಳಿಂದ ಹಳೆಯ ಕಟ್ಟಡ ಮಾಲೀಕರು ಮತ್ತು ಹೊಸದಾಗಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ಸಂಸ್ಥೆಗಳ ಮಾಲೀಕರು, ಸಲಹೆಗಾರರು ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಶಿಥಿಲಾವಸ್ಥೆಯ ಕಟ್ಟಡಗಳ ಮಾಲೀಕರಿಗೆ ನೋಟಿಸ್ ತಲುಪಿದೆ. ನಗರಸಭೆ ಅಧೀನದ ಹಳೆಯ ಕಟ್ಟಡಗಳಿಗೆ ಅ. 15ರ ನಂತರ ಮಳೆ ಕಡಿಮೆಯಾದದ್ದೇ ಮುಕ್ತಿ ಕಾದಿದೆ ಎನ್ನಲಾಗುತ್ತಿದೆ.
ಹಳೆಯ ಕಟ್ಟಡಗಳ ಮಾಲೀಕರನ್ನು ಗುರುತಿಸಿ, ಅವರ ವಿಳಾಸ ಹುಡುಕಿ ನೋಟಿಸ್ ನೀಡಲಾಗಿದೆ. ಹಳೆಯ ಕಟ್ಟಡ ಕುಸಿದರೆ ಆಗುವ ಅಪಾಯವನ್ನು ತಿಳಿಸಿ ಹೇಳಲಾಗಿದೆ. ಕಟ್ಟಡ ಕೆಡವಲು ಅಸಹಾಯಕತೆ ಇದ್ದರೆ, ನಗರಸಭೆ ಹಳೆಯ ಕಟ್ಟಡಗಳನ್ನು ಕೆಡವಿಕೊಡಲಿದೆ. ಬರುವ ದಿನಗಳಲ್ಲಿ ಅವರು ಆಸ್ತಿ ತೆರಿಗೆ ಕಟ್ಟುವಾಗ ಅಥವಾ ಮಾರಾಟ ಮಾಡುವಾಗ ಅಥವಾ ಹೊಸ ಕಟ್ಟಡ ಕಟ್ಟುವಾಗ, ಹಳೆಯ ಕಟ್ಟಡ ಕೆಡವಲು ನಗರಸಭೆಗೆ ತಗುಲಿದ ವೆಚ್ಚ ವಸೂಲಿ ಮಾಡಲಾಗುವುದು.
•ಎಸ್. ಯೋಗೇಶ್ವರ ಕಾರವಾರ ನಗರಸಭೆ ಪೌರಾಯುಕ್ತ
•ನಾಗರಾಜ ಹರಪನಹಳ್ಳಿ