Advertisement

ತೆರಿಗೆ ಪಾವತಿಸದ ಮೊಬೈಲ್‌ ಟವರ್‌ ಕಂಪೆನಿಗೆ ನೋಟಿಸ್‌

11:08 PM Oct 17, 2019 | Team Udayavani |

ಮಂಗಳೂರು: ಜಿಲ್ಲೆಯ ಮೊಬೈಲ್‌ ಟವರ್‌ ಕಂಪೆನಿಗಳು ಗ್ರಾಮ ಪಂಚಾಯತ್‌ಗಳಿಗೆ ತೆರಿಗೆ ಪಾವತಿ ಮಾಡುತ್ತಿಲ್ಲ ಎಂಬ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಅಂಥ ಕಂಪೆನಿಗಳಿಗೆ ನೋಟಿಸ್‌ ನೀಡಿ ತೆರಿಗೆ ಕಟ್ಟುವಂತೆ ಆದೇಶಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

Advertisement

ಗುರುವಾರ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಗ್ರಾ.ಪಂ. ತೆರಿಗೆ ಪಾವತಿ ಯಲ್ಲಿ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅವರು ಸೂಚಿಸಿದರು. ಪೆರ್ಮುದೆ ಗ್ರಾ. ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ಜಮೀನು ಕಾದಿರಿಸುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇನ್ನೂ ಕೆಲವು ಜಮೀನುಗಳ ವಿಚಾರಗಳು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ. ಹೀಗಾಗಿ ಆದಷ್ಟು ಬೇಗ ಈ ಕಾರ್ಯ ಪೂರ್ಣಗೊಳ್ಳುವ ಭರವಸೆಯಿದೆ ಮತ್ತು ರಾಜೀವ್‌ ಗಾಂಧಿ ನಿವೇಶನ ಯೋಜನೆಯಡಿಯಲ್ಲಿ ಖಾಲಿ ಇರುವ ಸರಕಾರಿ ಜಮೀನು ಸರ್ವೇ ಮಾಡಿ ನಿವೇಶನ ಇಲ್ಲದವರಿಗೆ ನ್ಯಾಯ ಬದ್ಧವಾಗಿ ವಿತರಿಸಿ ಎಂದವರು ಸೂಚಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಸಂಬಂಧ ಚರ್ಚೆ
ನಿಯಮಾನುಸಾರ ಆಯ್ಕೆಗೆ ಸೂಚನೆ ರಾಜೋತ್ಸವದ ಜಿಲ್ಲಾ ಪ್ರಶಸ್ತಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಯಾಮಾನುಸಾರ ಸರಕಾರದ ಮಾನದಂಡದ ಮೂಲಕ ಆಯ್ಕೆ ಮಾಡಬೇಕು. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನಿರೀಕ್ಷೆ ಇದ್ದವರಿಗೆ ಅಲ್ಲಿ ಪ್ರಶಸ್ತಿ ಸಿಗದೆ ಇದ್ದಾಗ ಜಿಲ್ಲಾ ಮಟ್ಟದಲ್ಲಿ ನೀಡುವುದು ಸಮಾಧಾನಕರ ತಂತ್ರ. ಹೀಗಾಗಿ ಅರ್ಹರ ಆಯ್ಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಮಾತನಾಡಿ, ಈಗಾಗಲೇ 60 ಅರ್ಜಿಗಳು ಬಂದಿವೆ. ಕಳೆದ ಬಾರಿ 25 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು. ಶಾಸಕ ಉಮಾನಾಥ ಕೋಟ್ಯಾನ್‌, ಈ ಬಾರಿ 40 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಸಚಿವರ ಗಮನ ಸೆಳೆದರು. ಸಚಿವ ಕೋಟ ಮಾತನಾಡಿ, ಎಲ್ಲ ಕ್ಷೇತ್ರಗಳಿಗೆ ಹಂಚಿಕೆಯಾಗುವಂತೆ ಕನಿಷ್ಠ 25 ಸಾಧಕರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಬಹುದು ಎಂದರು.

ಶಾಸಕ ಯು.ಟಿ. ಖಾದರ್‌ ಮಾತನಾಡಿ, ಉಳ್ಳಾಲದ ಸುತ್ತಮುತ್ತ, ಹುಬ್ಬಳ್ಳಿ ಮತ್ತು ಮುಂಬಯಿಗಳಲ್ಲಿ ಅಬ್ಬಕ್ಕ ಉತ್ಸವ ಆಚರಣೆಗೆ ಉದ್ದೇಶಿಸಲಾಗಿದೆ. ಸರಕಾರ ಇದಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಕಳೆದ ಬಾರಿ ಬಂದ 50 ಲಕ್ಷ ರೂ. ಅನುದಾನ ವಾಪಸ್‌ ಯಾಕೆ ಹೋಗಿದೆ ಎಂದು ಖಾದರ್‌ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಪರ ಜಿಲ್ಲಾಧಿಕಾರಿ ಮಾತನಾಡಿ, ಎಪ್ರಿಲ್‌ನಲ್ಲಿ ಅನುದಾನ ಬಂದಿತ್ತು. ಚುನಾವಣೆ ವೇಳೆ ಅದು ವಾಪಸಾಗಿದೆ ಎಂದರು.

Advertisement

ಪ್ರತೀ ವರ್ಷದಂತೆ ಕರಾವಳಿ ಉತ್ಸವ ಮತ್ತು ನದಿ ಉತ್ಸವವನ್ನು ಕೂಡ ಈ ಬಾರಿ ಆಚರಿಸಬೇಕು ಎಂದು ಖಾದರ್‌ ಆಗ್ರಹಿಸಿದರು. ಈ ಕುರಿತ ಪ್ರಸ್ತಾವನೆ ಸರಕಾರಕ್ಕೆ ಕಳುಹಿಸುವಂತೆ ಸಚಿವ ಕೋಟ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಯು.ಟಿ. ಖಾದರ್‌, ರಾಜೇಶ್‌ ನಾೖಕ್‌, ಉಮಾನಾಥ್‌ ಕೋಟ್ಯಾನ್‌, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಜಿ.ಪಂ. ಸಿಇಒ ಡಾ|ಆರ್‌. ಸೆಲ್ವಮಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next