Advertisement

ಮನೆ ಖಾಲಿ ಮಾಡಲು ಸೂಚನೆ

06:28 AM Feb 20, 2019 | Team Udayavani |

ಬೆಂಗಳೂರು: ಪೋಷಕರನ್ನು ನೋಡಿಕೊಳ್ಳದೇ, ಅನುಚಿತವಾಗಿ ವರ್ತಿಸಿದ ಮಗನ ವಿರುದ್ಧ ಕಾನೂನು ಚಾಟಿ ಬೀಸಿರುವ ಹೈಕೋರ್ಟ್‌, ಆತ ವಾಸ ಮಾಡುತ್ತಿರುವ ಮನೆಯನ್ನು ಖಾಲಿ ಮಾಡಿ ಪೋಷಕರಿಗೆ ಬಿಟ್ಟುಕೊಡುವಂತೆ ತಾಕೀತು ಮಾಡಿದೆ.

Advertisement

ತಮಗೆ ಮಗ ಸ್ಕಂದ ಶರತ್‌ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿ ನಗರದ ವೈಯಾಲಿಕಾವಲ್‌ ನಿವಾಸಿ ಪಿ. ರಾಜಗೋಪಾಲ್‌, ಪತ್ನಿ ಎ.ವಿಜಯಾ ಸಲ್ಲಿಸಿದ್ದ ದೂರಿನ ಮೇರೆಗೆ ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ನ್ಯಾ.ಅಲೋಕ್‌ ಆರಾಧೆ ನೇತೃತ್ವದ ಏಕಸದಸ್ಯ ಪೀಠ ಎತ್ತಿಹಿಡಿಯಿತು.

ಮಗ ಸ್ಕಂದ ಶರತ್‌ (36) ನಮಗೆ ಜೀವನ ನಿರ್ವಹಣಾ ವೆಚ್ಚ ನೀಡುತ್ತಿಲ್ಲ. ಆದ್ದರಿಂದ ಆತ ನಾವಿರುವ ಮನೆಯ ಮೊದಲ ಆಂತಸ್ತಿನಲ್ಲಿ ತನ್ನ ಕುಟುಂಬದ ಜೊತೆ ವಾಸಮಾಡುತ್ತಿದ್ದು, ಅದನ್ನು ಖಾಲಿ ಮಾಡಿದರೆ ನಮ್ಮ ಜೀವನ ನಿರ್ವಹಣೆಗೆ ಮನೆ ಬಳಸಿಕೊಳ್ಳಬಹುದು.

ಅಲ್ಲದೇ ಮಗ ನಮ್ಮೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಾನೆ. ಆದ್ದರಿಂದ ಮನೆ ಖಾಲಿ ಮಾಡುವಂತೆ ಮಗನಿಗೆ ನಿರ್ದೇಶನ ನೀಡುವಂತೆ ಕೋರಿ ಸ್ಕಂದ ಶರತ್‌ನ ತಂದೆ ಪಿ.ರಾಜಗೋಪಾಲ್‌ (74), ತಾಯಿ ಎ.ವಿಜಯಾ (71) ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಈ ಮನವಿ ಆಧರಿಸಿ “ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ನ್ಯಾಯಮಂಡಳಿ ಮುಖ್ಯಸ್ಥರೂ ಆದ ಉಪವಿಭಾಗಾಧಿಕಾರಿ, ಪ್ರತಿ ತಿಂಗಳೂ 10 ಸಾವಿರ ರೂ. ಪಾವತಿಸಬೇಕು ಹಾಗೂ 30 ದಿನಗಳ ಒಳಗಾಗಿ ಮನೆ ಖಾಲಿ ಮಾಡಬೇಕು ಎಂದು ಸ್ಕಂದ ಶರತ್‌ಗೆ ನಿರ್ದೇಶಿಸಿ 2018ರ ಡಿ. 4ರಂದು ಆದೇಶಿಸಿದ್ದರು.

Advertisement

ಇದನ್ನು ಪ್ರಶ್ನಿಸಿ ಸ್ಕಂದ ಶರತ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ ಉಪ ವಿಭಾಗಾಧಿಕಾರಿಗಳ ಆದೇಶ ಸೂಕ್ತವಾಗಿದೆ. ಮೇಲಾಗಿ ಅರ್ಜಿದಾರ ಸ್ಕಂದ ಪೋಷಕರೊಂದಿಗೆ ಅನುಚಿತವಾಗಿ ನಡೆದು ಕೊಂಡಿದ್ದಾನೆ.

ತಾಯಿಯನ್ನು ಮನೆಯಲ್ಲಿ ಮೆಟ್ಟಿಲುಗಳ ಮೇಲಿಂದ ತಳ್ಳಿದ, ಅವರನ್ನು ಭಾವನಾತ್ಮಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟ ಆರೋಪದಡಿ ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿದ್ದಾನೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಸ್ಕಂದ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಉಪ ವಿಭಾಗಾಧಿಕಾರಿಗಳ ಆದೇಶ ಎತ್ತಿಹಿಡಿಯಿತು.

Advertisement

Udayavani is now on Telegram. Click here to join our channel and stay updated with the latest news.

Next