ವಿಜಯಪುರ: ಬೆಂಗಳೂರಿನಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯನ್ನು ಕೃಷ್ಣಾ ತಟದಲ್ಲಿರುವ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಒಂದು ವಾರದಲ್ಲಿ ಸ್ಥಳಾಂತರಿಸಲು ಜಲಸಂಪನ್ಮೂಲ ಇಲಾಖೆ ತನ್ನ ಅಧೀನದಲ್ಲಿರುವ ಕೆಬಿಜೆಎನ್ಎಲ್ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕುರಿತು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತುರ್ತು ಸೂಚನೆ ನೀಡಿರುವ ಜಲಸಂಪನ್ಮೂಲ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ವ್ಯವಸ್ಥಾಪಕ ನಿರ್ದೇಶಕರ ಕಛೇರಿಯ ಸಂಪರ್ಕ ಕಛೇರಿಯೂ ಸೇರಿದಂತೆ ಇಡೀ ಕಛೇರಿಯ ಎಲ್ಲ ಸಿಬ್ಬಂದಿ ಸಮೇತ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯನ್ನು ಆಲಮಟ್ಟಿಗೆ ಸ್ಥಳಾಂತರ ಮಾಡುವಂತೆ ತಾಕೀತು ಮಾಡಿದ್ದಾರೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಆಡಳಿತಾತ್ಮಕವಾಗಿ ಉತ್ತರ ಕರ್ನಾಟಕ ಭಾಗದ ಜನರಿಗೆ ಸರ್ಕಾರದ ಆಡಳಿತ ಹತ್ತಿರವಾಗಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತುರ್ತು ಪತ್ರದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆಯೇನು?: ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ
ಇದೇ ವಿಷಯವಾಗಿ ರಾಜ್ಯ ಹೈಕೋರ್ಟ್ ನಲ್ಲಿ ಸಲ್ಲಿಕೆ ಆಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಬೇಕಿದೆ. ಹೀಗಾಗಿ ತುರ್ತಾಗಿ ತಮ್ಮ ಕಛೇರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವಾರದಲ್ಲಿ ಸಿಬ್ಬಂದಿ ಸಮೇತ ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರ ಮಾಡಿ, ಪಾಲನಾ ವರದಿ ಸಲ್ಲಿಸುವಂತೆಯೂ ತುರ್ತು ಪತ್ರದಲ್ಲಿ ನಿರ್ದೇಶಿಸಲಾಗಿದೆ.
2021 ಅಕ್ಟೋಬರ್ 30 ರಂದು ಈ ಕುರಿತು ಸರ್ಕಾರ ಹೊರಡಿಸಿರುವ ಆದೇಶದಂತೆ ಜಲಸಂಪನ್ಮೂಲ ಇಲಾಖೆ ಅಧೀನದಲ್ಲಿರುವ ಕೆಬಿಜೆಎನ್ಎಲ್ ಎಂ.ಡಿ. ಕಛೇರಿಯನ್ನು ಸ್ಥಳಾಂತರ ಮಾಡುವಂತೆ ತುರ್ತು ಸೂಚನೆಯೊಂದಿಗೆ ಪತ್ರದಲ್ಲಿ ವಿವರಿಸಲಾಗಿದೆ.