ಕಾರವಾರ: ಕುಮಟಾ ತಾಲೂಕಿನ ತಂಡ್ರಕುಳಿ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮತ್ತು ಆಸ್ತಿ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ ವಿತರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಅಧಿಕಾರಿಗಳಿಗೆ ಸೂಚಿಸಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಮತ್ತು ಕೋವಿಡ್-19 ತಡೆ ಮುಂಜಾಗೃತಾ ಕ್ರಮಗಳ ಕುರಿತು ಆಯ್ದು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ದುರ್ಘಟನೆ ಸಂಭವಿಸಿ ಎರಡು ವರ್ಷ ಕಳೆದರೂ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಇನ್ನೂ ಸಿಗದಿರುವುದು ವಿಷಾದನೀಯವಾಗಿದೆ. ಐಆರ್‌ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ವಿತರಿಸಲು ನಿರ್ಣಯ ತೆಗೆದುಕೊಳ್ಳತ್ತಕ್ಕದ್ದು, ವೈಜ್ಞಾನಿಕವಾಗಿ ಪರಿಹಾರ ನೀಡುವಲ್ಲಿ ತೊಂದರೆಯಾದಲ್ಲಿ ಮಾನವೀಯ ನೆಲೆಯಲ್ಲಿ ಪರಿಹಾರ ನೀಡುವ ಭರವಸೆ ನೀಡಬೇಕೆಂದರು.
ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕೂಡ ಸಂಬಂಧಿಸಿದ ಇಲಾಖೆಗಳು ವಿಫಲವಾಗುತ್ತಿವೆ. ಕೊಳವೆಬಾವಿ ಕೊರೆಸುವುದು, ಪೈಪ್‌ಲೈನ್ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಏಕ ಕಾಲದಲ್ಲಿ ಒದಗಿಸಿ ಫಲಾನುಭವಿಗಳು ಯೋಜನೆ ಸದುಪಯೋಗ ಪಡೆಯುವಂತೆ ಮಾಡುವುದು ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ಚೆನ್ನಾಗಿ ಆಗಿದೆ. ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ ಇದೆ. ಈಗಾಗಲೇ 4600 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದೆ. ರಸಗೊಬ್ಬರ ಹಾಗೂ ಹಸುಗಳ ಮೇವು ಕೂಡ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಉಸ್ತುವಾರಿ ಸಚಿವರು ಸಭೆ ನಡೆಸಿದ ಬಳಿಕ ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ದಳಕ್ಕೆ ಪ್ರಕೃತಿ ವಿಕೋಪ ಮುಂಜಾಗೃತಾ ಸಲಕರಣೆಗಳನ್ನು ವಿತರಿಸಿದರು. ಆಯುಷ್ ಇಲಾಖೆಯಿಂದ ಚವನಪ್ರಾಶ, ಅಮೃತಬಳ್ಳಿಯ ಮಾತ್ರೆಗಳನ್ನು ಸಭೆಗೆ ಹಾಜರಾದವರಿಗೆ ವಿತರಿಸಲಾಯಿತು. ಜಿಲ್ಲಾಧಿಕಾರಿ ಹರೀಶ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್- 19 ಸ್ಥಿತಿಗತಿಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಆಸ್ಪತ್ರೆ ವ್ಯವಸ್ಥೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಪ್ರತಿ ತಾಲೂಕಿನಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸುಸಜ್ಜಿತ ಕೋವಿಡ್- 19 ವಾರ್ಡ್ ಮಾಡಲಾಗಿದ್ದು, ಮೊದಲ ಹಂತದಲ್ಲಿ 250, ನಂತರ 300 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಜಿಲ್ಲೆಗೆ ಹೊರಗಡೆಯಿಂದ ಬಂದವರಿಗೆ ಆರೋಗ್ಯ ತಪಾಸಣೆಗೆ ತಂಡ ಮಾಡಲಾಗಿದ್ದು, ಸರಕಾರದ ಮಾರ್ಗಸೂಚಿಯಂತೆ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ ಎಂದರು.
ಶಾಸಕಿ ರೂಪಾಲಿ ನಾಯ್ಕ, ಜಿ.ಪಂ. ಸಿಇಒ ಎಂ.ರೋಷನ್, ಎಸ್‌ಪಿ ಶಿವಪ್ರಕಾಶ್ ದೇವರಾಜು, ಸಹಾಯಕ ಆಯುಕ್ತೆ ಪ್ರಿಯಾಂಗಾ ಎಂ. ಸೇರಿದಂತೆ ಇತರರು ಇದ್ದರು.