Advertisement

ಟಿಕೆಟ್‌ ನೀಡದ ಬಸ್‌ ತಪಾಸಣೆಗೆ ಸೂಚನೆ 

12:30 PM Aug 04, 2018 | |

ಮಂಗಳೂರು : ನಗರದ ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ನೀಡದಿರುವ ಬಗ್ಗೆ ಇವತ್ತಿನಿಂದಲೇ ತಪಾಸಣೆ ಕಾರ್ಯಾಚರಣೆ ನಡೆಸಿ ಟಿಕೆಟ್‌ ಕೊಡದಿರುವ ಪ್ರಕರಣಗಳು ಕಂಡು ಬಂದರೆ ಬಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಅವರು ಟ್ರಾಫಿಕ್‌ ಪೊಲೀಸರಿಗೆ ಸೂಚಿಸಿದ್ದಾರೆ.

Advertisement

ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೆಲವು ಮಂದಿ ಸಾರ್ವಜನಿಕರು ಖಾಸಗಿ ಸಿಟಿ ಬಸ್‌ ಗಳಲ್ಲಿ ಟಿಕೆಟ್‌ ಕೊಡದಿರುವ ಬಗ್ಗೆ ದೂರು ನೀಡಿದರು. ಟಿಕೆಟ್‌ ವಿಚಾರದಲ್ಲಿ ಪುನರಪಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಮಿಷನರ್‌ ತತ್‌ಕ್ಷಣ ಕಾರ್ಯಾಚರಣೆಗೆ ಆದೇಶಿಸಿದರು.

ಪ್ರತಿ ದಿನ ಒಂದೆರಡು ಗಂಟೆ ಕಾಲ ತಪಾಸಣೆ ನಡೆಸುತ್ತಿರಬೇಕು. ಟಿಕೆಟ್‌ ನೀಡದಿರುವ ಪ್ರಕರಣಗಳು ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಬಸ್‌ಗಳನ್ನು ಠಾಣೆಗೆ ಒಯ್ದು ಮುಟ್ಟುಗೋಲು ಹಾಕಿ ಕೇಸು ದಾಖಲಿಸಬೇಕು ಎಂದು ಕಮಿಷನರ್‌ ಸೂಚಿ ಸಿದರು. ಟಿಕೆಟ್‌ ಎನ್ನುವುದು ಬಸ್‌ ನಲ್ಲಿ ಪ್ರಯಾ ಣಿಸಿದ ಬಗ್ಗೆ ನೀಡಲಾಗುವ ಅಧಿಕೃತ ದಾಖಲೆ ಪತ್ರವಾಗಿದೆ. ಪ್ರಯಾಣ ಭತ್ತೆಯನ್ನು ಕ್ಲೈಮ್‌ ಮಾಡುವವರಿಗೆ ಟಿಕೆಟ್‌ ಅಗತ್ಯವಾಗಿಬೇಕು. ಅಪಘಾತಗಳ ಸಂದರ್ಭದಲ್ಲಿ ವಿಮಾ ಸೌಲಭ್ಯ ಪಡೆಯಲು ಟಿಕೆಟ್‌ ಸಹಕಾರಿಯಾಗುತ್ತದೆ. ಹಾಗಾಗಿ ಟಿಕೆಟ್‌ನ್ನು ನಗಣ್ಯವಾಗಿ ಪರಿಗಣಿಸಬಾರದು. ಬಸ್‌ ನಿರ್ವಾಹಕರು ಪ್ರಯಾಣಿಕರಿಗೆ ಕಡ್ಡಾಯವಾಗಿ ಟಿಕೆಟ್‌ ನೀಡುವಂತಾಗಬೇಕು ಎಂದು ಸಾರ್ವಜನಿಕರು ಪೊಲೀಸ್‌ ಕಮಿಷನರ್‌ ಅವರ ಗಮನಕ್ಕೆ ತಂದರು. ಟಿಕೆಟ್‌ ನೀಡದಿರುವ ಪ್ರಕರಣಗಳ ಜತೆಗೆ ಬಸ್‌ ನಿರ್ವಾಹಕರ ಲೈಸನ್ಸನ್ನೂ ಪರಿಶೀಲಿಸುವಂತೆ ಕಮಿಷನರ್‌ ಆದೇಶಿಸಿದರು.

ವ್ಯವಸ್ಥೆಗೆ ಲೈಸನ್ಸ್‌ ಅಗತ್ಯ
ಮನೆಯಲ್ಲಿ ಪೇಯಿಂಗ್‌ ಗೆಸ್ಟ್‌ ವ್ಯವಸ್ಥೆ ಕಲ್ಪಿಸುವಾಗ ಪಾಲಿಕೆಯಿಂದ ಪರವಾನಿಗೆ ಪಡೆಯುವುದು ಅಗತ್ಯ ಎಂದು ಪೊಲೀಸ್‌ ಕಮಿಷನರ್‌ ಅವರು ಹಿರಿಯ ನಾಗರಿಕ ಮಹಿಳೆಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು. ಲೈಸನ್ಸ್‌ ಪಡೆಯದೆ ಇದ್ದಲ್ಲಿ ಒಂದೊಮ್ಮೆ ಪೇಯಿಂಗ್‌ ಗೆಸ್ಟ್‌ ವ್ಯವಸ್ಥೆ ಇರುವಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಬರುತ್ತದೆ. ಅಲ್ಲದೆ ಪೇಯಿಂಗ್‌ ಗೆಸ್ಟ್‌ ಸವಲತ್ತು ಒಂದು ಕಮರ್ಶಿಯಲ್‌ ಚಟುವಟಿಕೆ. ಹಾಗಾಗಿ ಲೈಸನ್ಸ್‌ ಪಡೆಯುವುದು ಅಗತ್ಯ ಎಂದರು.

ಹಂಪನಕಟ್ಟೆಯಲ್ಲಿ ಹಳೆ ಕಾಂಗ್ರೆಸ್‌ ಕಚೇರಿ ಬಳಿ ಪ್ರಯಾಣಿಕರನ್ನು ಬಸ್‌ ಹತ್ತಿಸಿಕೊಳ್ಳಲು ಪ್ರಾಯೋಗಿಕವಾಗಿ ಅವಕಾಶ ಕಲ್ಪಿಸಿದ ಬಗ್ಗೆ ಹಾಗೂ ತೊಕ್ಕೊಟ್ಟು ಫ್ಲೈ ಓವರ್‌ ಕೆಳ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟ ಬಗ್ಗೆ ಪರಿಸರ ಪ್ರೇಮಿ ಬಿ.ಎಸ್‌. ಹಸನಬ್ಬ ಅವರು ಪೊಲೀಸರನ್ನು ಅಭಿನಂದಿಸಿದರು.

Advertisement

ಶ್ರೀನಿವಾಸ್‌ ಕಾಲೇಜು ಬಳಿ ತಾವು ಹಲವಾರು ವರ್ಷಗಳಿಂದ ಬೆಳಗ್ಗೆ ಸಂಜೆ ನೀರೆರೆದು ಪೋಷಿಸಿದ 4 ಮರಗಳನ್ನು ಇತ್ತೀಚೆಗೆ ಕಡಿಯಲಾಗಿದ್ದು, ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಈ ಬಗ್ಗೆ ಅರಣ್ಯ ಇಲಾಖೆಯ ಜತೆ ಮಾತನಾಡುವುದಾಗಿ ಕಮಿಷನರ್‌ ತಿಳಿಸಿದರು. ವಿಮಾನ ನಿಲ್ದಾಣದಲ್ಲಿ ಓಲಾ ಟ್ಯಾಕ್ಸಿಗಳಿಗೆ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಬೇಕು ಎಂಬು ದಾಗಿ ಸಾರ್ವನಿಕರಿಂದ ಕರೆ ಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌, ಹಣ ಕೊಟ್ಟು ಸ್ಥಳಾವಕಾಶವನ್ನು ಖರೀದಿಸಬೇಕಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ ಎದುರು ಜಿಲ್ಲಾಧಿಕಾರಿ ಮತ್ತು ಮೇಯರ್‌ ಅವರ ವಾಹನಗಳನ್ನು ಮುಖ್ಯ ದ್ವಾರದ ಎದುರು ನಿಲ್ಲಿಸಲಾಗುತ್ತಿದ್ದು, ಇದರಿಂದ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಕಚೇರಿಯ ಒಳಗೆ ಹೋಗಲು ಕಷ್ಟವಾಗುತ್ತಿದೆ ಎಂದೊಬ್ಬರು ದೂರಿದರು. ಈ ಕುರಿತಂತೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕಮಿಷನರ್‌ ಸ್ಪಷ್ಟಪಡಿಸಿದರು.

ಇದು 86ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 27 ಕರೆಗಳು ಬಂದವು. ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಡಿಸಿಪಿ ಉಮಾ ಪ್ರಶಾಂತ್‌, ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಮಂಜುನಾಥ್‌, ಮೋಹನ್‌ ಕೊಟ್ಟಾರಿ, ಎಎಸ್‌ಐಗಳಾದ ಯೂಸುಫ್‌, ನಾಗೇಶ್‌ ಹೆಡ್‌ಕಾನ್ಸ್‌ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ರಿಕ್ಷಾ ಪಾರ್ಕಿಂಗ್‌ ಸಮಸ್ಯೆ
ಹಂಪನಕಟ್ಟೆ, ಕಂಕನಾಡಿ ಫಾದರ್‌ ಮುಲ್ಲರ್‌ ರಸ್ತೆ, ಜ್ಯೋತಿ ಜಂಕ್ಷನ್‌ ಮುಂತಾದ ಕಡೆ ರಿಕ್ಷಾಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಜನರ ಓಡಾಟಕ್ಕೆ ಅನನುಕೂಲವಾಗಿದೆ. ಕೆಲವು ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲು ಸೀಟನ್ನು ಬಿಟುಕೊಡುತ್ತಿಲ್ಲ; ಆದರೆ ಹುಡುಗಿಯರು ಬಂದಾಗ ಬೇಗನೆ ಸೀಟು ಬಿಟ್ಟು ಕೊಡುತ್ತಾರೆ. ಕಾವೂರು ಜಂಕ್ಷನ್‌ನಲ್ಲಿ ಫುಟ್‌ ಪಾತ್‌ನ್ನು ವಾಹನಗಳು ಒತ್ತುವರಿ ಮಾಡಿದ್ದು, ಜನ ಸಂಚಾರಕ್ಕೆ ಅವಕಾಶವೇ ಇಲ್ಲವಾಗಿದೆ. ಫಳ್ನೀರ್‌ ರಸ್ತೆಯ ಹೈಲ್ಯಾಂಡ್‌ ಬಳಿ ರಸ್ತೆಯ ಎರಡೂ ಬದಿ ವಾಹನ ನಿಲುಗಡೆಯಿಂದ ಪಾದ ಚಾರಿಗಳಿಗೆ ಸಮಸ್ಯೆ ಯಾಗಿದೆ ಎಂಬ ದೂರುಗಳು ಬಂದವು. 

Advertisement

Udayavani is now on Telegram. Click here to join our channel and stay updated with the latest news.

Next