Advertisement
ವಿದ್ಯಾರ್ಥಿ ಪೋಷಕರಿಂದ ಲಕ್ಷಾಂತರ ರೂ. ಡೊನೇಷನ್ ಮತ್ತಿತರ ಹೆಸರಿನಲ್ಲಿ ವಸೂಲು ಮಾಡುತ್ತಿರುವ ಕಾಲೇಜುಗಳು ಸಮರ್ಪಕ ದಾಖಲೆಗಳನ್ನು ಹೊಂದಿಲ್ಲ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಎಚ್ಚೆತ್ತುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ, ಸಂಬಂಧಪಟ್ಟ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿದೆ. ಏಳು ದಿನಗಳೊಳಗಾಗಿ ಸೂಕ್ತ ಸಮಜಾಯಿಷಿ ನೀಡದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ನಾಯಿ ಕೊಡೆಯಂತೆ ತಲೆ ಎತ್ತಿದ ಪಿಯು ಕಾಲೇಜು: ದ್ವಿತೀಯ ಪಿಯು ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಯಿಂದ ಪ್ರಮುಖ ಘಟ್ಟವಾಗಿದ್ದು, ಬಹುತೇಕ ಪೋಷಕರು ಹಣದ ಮುಖ ನೋಡದೇ ಉತ್ತಮ ಕಾಲೇಜಿಗಾಗಿ ಅರಸುವುದು ಸಾಮಾನ್ಯವಾಗಿದೆ. ಇದನ್ನು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ದ್ವಿತೀಯ ಪಿಯು ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ.
Related Articles
Advertisement
ತಾವು ಮಕ್ಕಳನ್ನು ಸೇರಿಸುತ್ತಿರುವ ಕಾಲೇಜುಗಳಿಗೆ ಸಮರ್ಪಕ ದಾಖಲಾತಿ, ಅನುಮತಿ ಇದೆಯೇ ಎನ್ನುವುದನ್ನೂ ಗಮನಿಸುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಾಲೇಜುಗಳು, ದ್ವಿತೀಯ ಪಿಯು ಕೋಚಿಂಗ್, ಸಿಇಟಿ ಕೋಚಿಂಗ್, ನೆಟ್ ಕೋಚಿಂಗ್, ಗೇಟ್ ಕೋಚಿಂಗ್ ಇತ್ಯಾದಿ ನೆಪದಲ್ಲಿ ಎರಡು ಮೂರು ಲಕ್ಷ ರೂ. ಅನ್ನು ಪ್ರತಿ ವಿದ್ಯಾರ್ಥಿಯಿಂದ ವಸೂಲು ಮಾಡುತ್ತಿವೆ.
ರಾಜಾರೋಷವಾಗಿ ನಡೆದ ಕಾಲೇಜು ದಂಧೆ: ಇಂತಹ ಕಾಲೇಜುಗಳಲ್ಲಿ ಕೇವಲ ನಗರ ಮಟ್ಟದ ವಿದ್ಯಾರ್ಥಿಗಳು ಮಾತ್ರ ದಾಖಲಾತಿ ಆಗುವುದಲ್ಲದೇ, ಜಿಲ್ಲಾ ಕೇಂದ್ರದ ಸುತ್ತಮುತ್ತಲ ತಾಲೂಕುಗಳಿಂದಲೂ ಬಸ್‌ಗಳ ಮೂಲಕ ನೂರಾರು ಮಕ್ಕಳನ್ನು ಕರೆತಂದು ನಿಮಯ ಮೀರಿ ದಾಖಲಾತಿ ಮಾಡಿಕೊಂಡು ರಾಜಾರೋಷವಾಗಿ ಕಾಲೇಜು ನಡೆಸಲಾಗುತ್ತಿದೆ.
ಪದವಿ ಪಿಯು ಇಲಾಖೆ ಮತ್ತು ಅಧಿಕಾರಿಗಳಿಗೆ ಕಿಂಚಿತ್ತೂ ಬೆಲೆ ನೀಡದೇ ಬಹುತೇಕ ಹಣ ಮಾಡುವ ಏಕೈಕ ನೆಪದಿಂದಲೇ ನಡೆಯುತ್ತಿರುವ ಪಿಯು ಕಾಲೇಜುಗಳ ದಂಧೆ ಹಾಗೂ ಬೆಂಗಳೂರು ಮೂಲ ಮತ್ತು ನೆರೆಯ ರಾಜ್ಯಗಳ ಶಿಕ್ಷಣ ಸಂಸ್ಥೆಗಳು ಅಕ್ರಮಗಳನ್ನು ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ತನ್ನ ನೋಟಿಸ್‌ನಲ್ಲಿ ಪ್ರಶ್ನಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮೇ 29 ರಂದು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂದೇ ಹೆಸರಾಗಿರುವ ವಿದ್ಯಾಜ್ಯೋತಿ ಪದವಿ ಪೂರ್ವ ಕಾಲೇಜಿಗೆ ನೋಟಿಸ್ ನೀಡಿ, ಇದೇ ಕಾಲೇಜಿನಲ್ಲಿ ಅನಧಿಕೃತವಾಗಿ ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆ ನಡೆಯುತ್ತಿರುವ ಕುರಿತು ವಿವರಣೆ ಕೋರಿದ್ದಾರೆ. ಅಚ್ಚರಿಯ ವಿಷಯವೆಂದರೆ, ಇದೇ ಕಾಲೇಜು ಹಲವಾರು ವರ್ಷಗಳಿಂದ ಎಕ್ಸೆಲ್ ಅಕಾಡೆಮಿಕ್ಸ್ ಹೆಸರಿನಲ್ಲಿಯೇ ವ್ಯವಹರಿಸುತ್ತ ಜಾಹೀರಾತು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರೂ, ಕರಪತ್ರಗಳನ್ನು ಮುದ್ರಿಸಿದ್ದರೂ, ಇದೇ ಹೆಸರಿನಲ್ಲಿ ಕಾಲೇಜು ಬಸ್‌ಗಳನ್ನು ಓಡಿಸುತ್ತಿದ್ದರೂ ಪದವಿ ಪೂರ್ವ ಕಾಲೇಜು ಇಲಾಖೆ ಇದಾವುದೂ ತಮಗೆ ತಿಳಿದಿಲ್ಲ. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ವಿವರಿಸಿರುವುದು ಕಾಲೇಜು ಆಡಳಿತ ಮಂಡಳಿ ಎಷ್ಟರ ಮಟ್ಟಿಗೆ ಪ್ರಭಾವಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದೇ ರೀತಿಯಲ್ಲಿಯೇ ತಮ್ಮದೇ ಕಾಲೇಜಿನ ಹೆಸರಿನಲ್ಲಿ ಮತ್ತೂಂದು ಕಾಲೇಜನ್ನು ನಡೆಸುತ್ತಿರುವ ಕಾರಣಕ್ಕಾಗಿ ಚಿನ್ಮಯ ಪದವಿ ಪೂರ್ವ ಕಾಲೇಜಿಗೂ ಪದವಿ ಪಿಯು ಉಪ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ. ಅನುಮತಿ ಪಡೆದ ಕಟ್ಟಡದಲ್ಲಿ ಕಾಲೇಜು ನಡೆಸದೇ ತಮ್ಮಿಷ್ಟದಂತೆ ಕಾಲೇಜನ್ನು ಸ್ಥಳಾಂತರಿಸಿಕೊಂಡಿರುವ ಕುರಿತು ಮತ್ತೂಂದೆರೆಡು ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಈ ನೋಟೀಸ್‌ನ ನಂತರವಾದರೂ ಜಿಲ್ಲೆಯಲ್ಲಿ ಅನಧಿಕೃತ ಸಂಸ್ಥೆಗಳ ನಿಮಯ ಮೀರಿ ನಡೆಯುತ್ತಿರುವ ಕಾಲೇಜುಗಳ ವಸೂಲಾತಿ ದಂಧೆಗೆ ಕಡಿವಾಣ ಬೀಳುತ್ತದೆಯೇ ಕಾದು ನೋಡಬೇಕಿದೆ. * ಕೆ.ಎಸ್.ಗಣೇಶ್