ಬೆಂಗಳೂರು: ಖಾಸಗಿ ವ್ಯಕ್ತಿಯೊಬ್ಬರ ಜಮೀನನ್ನು ರುದ್ರಭೂಮಿಗಾಗಿ ಸ್ವಾಧೀನ ಪಡಿಸಿಕೊಂಡಾಗ, ಭೂಮಿ ಕಳೆದುಕೊಂಡ ಮಾಲೀಕರಿಗೆ ಪಯಾರ್ಯ ಜಮೀನು ಕೊಡಲು ಸಚಿವ ಸಂಪುಟದ ಅನುಮೋದನೆಯ ಅಗತ್ಯತೆಯನ್ನು ಪ್ರತಿಪಾದಿಸುವ ನಿಯಮದ ಬಗ್ಗೆ ಜು.24 (ಮಂಗಳವಾರ) ವಿವರಣೆ ಕೊಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತು.
ಎಸ್.ವಿ. ಯೋಗೇಶ್ವರ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾ. ರಾಘವೇಂದ್ರ ಚೌವ್ಹಾಣ್ ಮತ್ತು ನ್ಯಾ. ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಬೆಂಗಳೂರು ಉತ್ತರ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ತಮಗೆ ಸೇರಿದ್ದ 24 ಗುಂಟೆ ಜಾಗವನ್ನು ಸ್ಮಶಾನ ಭೂಮಿ ವಿಸ್ತರಣೆಗೆಂದು ನಗರ ಜಿಲ್ಲಾಡಳಿತವು ಯಾವುದೇ ಆದೇಶ ಹೊರಡಿಸದೆ ವಶಪಡಿಸಿಕೊಂಡಿದೆ.
ಹೀಗಾಗಿ, ಪರ್ಯಾಯ ಜಮೀನು ಕಲ್ಪಿಸುವಂತೆ ಹೈಕೊರ್ಟ್ ಆದೇಶಿಸಿ ಒಂದು ವರ್ಷ ಕಳೆದರೂ ಜಮೀನು ನೀಡಿಲ್ಲ ಎಂದು ಯೋಗೇಶ್ವರ್ ಅರ್ಜಿಯಲ್ಲಿ ದೂರಿದ್ದರು. ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ಯೋಗೇಶ್ವರ್‌ಗೆ ನೀಡಲು ಪರ್ಯಾಯ ಜಮೀನು ಗುರುತಿಸುವಂತೆ ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು.
ಸೋಮವಾರ ವಿಚಾರಣೆ ವೇಳೆ, ಅರ್ಜಿದಾರರಿಗೆ ಮಂಜೂರು ಮಾಡಲು ಪರ್ಯಾಯ ಜಾಗ ಗುರುತಿಸಲಾಗಿದೆ. ಜಾಗವನ್ನು ಅರ್ಜಿದಾರರು ಸಹ ಒಪ್ಪಿದ್ದಾರೆ. ಆದರೆ, ಜಾಗ ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ಪಡೆಯಬೇಕಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು.
ಇದರಿಂದ ಪರ್ಯಾಯ ಜಮೀನು ಮಂಜೂರು ಮಾಡಲು ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸುವ ನಿಮಯದ ವಿವರಣೆಯನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.