ಕಲಬುರಗಿ: ನಗರದ ನೂತನ ಜೇವರ್ಗಿ ರಸ್ತೆಯಲ್ಲಿನ ಮದರ ಥೆರೆಸಾ ಶಾಲೆ ಬಳಿ 23 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಮೇಲ್ಸೇತುವೆ ಕಾಮಗಾರಿಯ ಒಂದು ಬದಿ ರಸ್ತೆಯನ್ನು ಮಾರ್ಚ್ ಅಂತ್ಯದ ಒಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಒಂದು ಬದಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ನಂತರ ಇನ್ನೊಂದು ಬದಿಯಿರುವ ರಸ್ತೆ ಮೇಲ್ಸೇತುವೆ ಕೆಡವಿ ಶೀಘ್ರವೇ ರಸ್ತೆ ನಿರ್ಮಿಸಬೇಕು ಎಂದರು.
ಈ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ಒಂಭತ್ತು ಜನರಿಗೆ ಪರಿಹಾರ ನೀಡುವ ಸಂಬಂಧ ಜಮೀನು ಮಾಲೀಕರೊಂದಿಗೆ ಪಾಲಿಕೆ ಆಯುಕ್ತರು ಕೂಡಲೆ ಸಭೆ ನಡೆಸಿ ಪರಿಹಾರ ನೀಡಲು ಕ್ರಮ ವಹಿಸಬೇಕು. ಈ ರಸ್ತೆ ಬದಿಯಲ್ಲಿ ದ್ವಿಚಕ್ರ, ಸೈಕಲ್ ಸವಾರರು ಮತ್ತು ಪಾದಚಾರಿಗಳು ಓಡಾಡಲು ಅನುಕೂಲವಾಗುವಂತೆ ಸೇವಾ ರಸ್ತೆ ನಿರ್ಮಿಸಬೇಕು. ಅಲ್ಲದೆ ಬಿದ್ದಾಪುರ ಕಾಲೋನಿ-ಹಳೇ ಜೇವರ್ಗಿ ರಸ್ತೆಗೆ ಸಂಪರ್ಕ ಕಲ್ಪಸಲು ಪ್ರಸ್ತುತ ಈ ರಸ್ತೆ ಕೆಳ ಮಾರ್ಗ ಸಹ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಜನರಿಗೆ ಮತ್ತಷ್ಟು ಒಳ್ಳೆಯದಾಗಲಿದೆ ಎಂದರು.
ನಂತರ ಅಫಜಲಪುರ ರಸ್ತೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಸ್ಥಳದಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತ ಅಮೀನ್ ಮುಖ್ತಾರ ಮಾತನಾಡಿ, ಪ್ರಸ್ತುತ ಈ ಯೋಜನೆಗೆ 28.35 ಕೋಟಿ ರೂ. ಮೊತ್ತದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ.
ಕಾರಣಾಂತರದಿಂದ ಕಾಮಗಾರಿ ತಡವಾಗಿರುವುದರಿಂದ ಕಾಮಗಾರಿ ವೆಚ್ಚ 35 ಕೋಟಿ ರೂ.ಗೆ ಹೆಚ್ಚಳವಾಗುತ್ತಿದೆ. ಟೆಂಡರ್ ಮೊತ್ತ ಹೊರತುಪಡಿಸಿ ಹೆಚ್ಚುವರಿಯಾಗಿ 2ರಿಂದ 3 ಕೋಟಿ ರೂ. ಅನುದಾನ ನೀಡಿದಲ್ಲಿ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಯೋಜನಾ ವೆಚ್ಚ ಹೆಚ್ಚಳವಾಗಿದ್ದರಿಂದ ಹೆಚ್ಚುವರಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆೆ ಎಂದರು.
ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ, ಕಾರ್ಯನಿರ್ವಾಹಕ ಅಭಿಯಂತರ ಶಿವಣಗೌಡ ಪಾಟೀಲ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇದ್ದರು.