ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಮೈಕ್ರೊ ಮತ್ತು ಮ್ಯಾಕ್ರೊ ಕಾಮಗಾರಿಗಳನ್ನು ಜ. 31ರೊಳಗೆ ಸಂಪೂರ್ಣವಾಗಿ ಮುಗಿಸಬೇಕು ಎಂದು ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಲಬುರಗಿ ಜಿಲ್ಲೆಯಲ್ಲಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ಕಾಮಗಾರಿಗಳ ಭೌತಿಕ ಪ್ರಗತಿಯನ್ನು ಆಗಾಗ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬೇಕು ಎಂದು ಸೂಚಿಸಿದರು. ಮ್ಯಾಕ್ರೊ ಕಾಮಗಾರಿಗಳು ತಕ್ಕ ಮಕ್ಕಟಿಗೆ ಮುಗಿದಿದ್ದು, ಮೈಕ್ರೊ ಕಾಮಗಾರಿಗಳು ಇನ್ನು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿದ ಕಾರ್ಯದರ್ಶಿಗಳು ಈ ಕುರಿತು ಕಳೆದ ಸಭೆಯಲ್ಲಿ ಸೂಚಿಸಲಾಗಿದ್ದರೂ ಇಲ್ಲಿಯವರೆಗೂ ಕಾಮಗಾರಿ ಮುಗಿಸದ ಅಧಿ ಕಾರಿಗಳ ಮೇಲೆ ಸಿಡಿಮಿಡಿಗೊಂಡು ಬೇಗ ಮುಗಿಸುವಂತೆ ತಾಕೀತು ಮಾಡಿದರು.
ಕಲಬುರಗಿ ನಗರದಲ್ಲಿ ಮ್ಯಾಕ್ರೋ ಯೋಜನೆಯಡಿ 10 ಕಾಮಗಾರಿಗಳಿಗೆ ಅಂದಾಜು ಪಟ್ಟಿ ಮಾಡಲಾಗಿದೆ. ಅದೇ ರೀತಿ ಜೇವರ್ಗಿ ತಾಲೂಕಿನಲ್ಲಿ 3, ಅಫಜಲಪುರ ತಾಲೂಕಿನಲ್ಲಿ 25 ಹಾಗೂ ಸೇಡಂ ತಾಲೂಕಿನಲ್ಲಿ 30 ಕಾಮಗಾರಿಗಳಿಗೆ ಅಂದಾಜು ಪಟ್ಟಿಗಳ ಮಾಹಿತಿ ಬರಬೇಕಿದೆ. ಇನ್ನುಳಿದಂತೆ ಎಲ್ಲ ತಾಲೂಕಿನಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಕೆಲವು ಕಡೆ ಕಾಮಗಾರಿಗಳ ನಿರ್ಮಾಣಕ್ಕೆ ಸ್ಥಳದ ಸಮಸ್ಯೆಯಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಸ್ಥಳೀಯ ಹಂತದಲ್ಲಿ ನಿವಾರಿಸಿ ಕಾಲಮಿತಿಯಲ್ಲಿ ಕಾಮಗಾರಿಗಳು ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿರ್ಮಿತಿ ಕೇಂದ್ರದಿಂದ ನಡೆಯುತ್ತಿರುವ 31 ಕಾಮಗಾರಿಗಳಲ್ಲಿ 2 ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಪ್ರಗತಿಯಲ್ಲಿರುವ 29 ಕಾಮಗಾರಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನಿರ್ಮಿತಿ ಕೇಂದ್ರದ ಅಧಿ ಕಾರಿಗಳಿಂದ ಕಾರ್ಯದರ್ಶಿಗಳು ಪಡೆದರು.
2014-15ನೇ ಸಾಲಿನಲ್ಲಿ ಆರಂಭಿಸಲಾದ 10 ಕಾಮಗಾರಿಗಳಲ್ಲಿ 7 ಕಾಮಗಾರಿಗಳು 2020ರ ಜನವರಿಯಲ್ಲಿ ಮುಗಿಯುತ್ತವೆ. ಉಳಿದ 3 ಕಾಮಗಾರಿಗಳಿಗೂ ವೇಗ ಹೆಚ್ಚಿಸಿ ಎಂದು ಹೇಳಿದರು.
ಕಲಬುರಗಿ ನಗರದಲ್ಲಿನ ಯಾವುದೇ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ಸಮಸ್ಯೆಗಳಿದ್ದಲ್ಲಿ ಪಾಲಿಕೆ ಇಂಜಿನಿಯರುಗಳ ಸಹಾಯ ಪಡೆಯಬೇಕು. ಅಲ್ಲಿನ ಚುನಾಯಿತ ಪ್ರತಿನಿ ಧಿಗಳಿಗೆ ಮಾಹಿತಿ ನೀಡುವುದಲ್ಲದೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಮುಗಿಸಬೇಕು ಎಂದು ಸಲಹೆ ನೀಡಿದರು.
ನಗರ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸಂಬಂಧಿಸಿದ ಅನುಷ್ಠಾನ ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು. ಕಲಬುರಗಿ ನಗರದ ಅಗ್ನಿಶಾಮಕ ಪೊಲೀಸ್ ಠಾಣೆ ಪೀಠೊಪಕರಣಗಳಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತ ಬಿಡುಗಡೆಗೆ ಮಂಡಳಿಗೆ ಅಗತ್ಯ ಮಾಹಿತಿ ಸಲ್ಲಿಸಿ ಪಡೆಯಬಹುದು ಎಂದು ಹೇಳಿದರು. ಜಿಲ್ಲಾ ಧಿಕಾರಿ ಶರತ್ ಬಿ., ಜಿಪಂ ಸಿಒ ಡಾ| ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಅನುಷ್ಠಾನ ಏಜೆನ್ಸಿಗಳ ಅ ಧಿಕಾರಿಗಳು ಸಭೆಯಲ್ಲಿದ್ದರು.