ದೊಡ್ಡಬಳ್ಳಾಪುರ: ಈ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರಿಗೆ ಯಾವುದೇ ಸಾಲ ಅಥವಾ ಬಡ್ಡಿ ಮನ್ನಾ ಘೋಷಣೆ ಮಾಡಿಲ್ಲ. ಈ ದಿಸೆಯಲ್ಲಿ ರೈತರು ಸರ್ಕಾರದ ಸಾಲ ಮನ್ನಾ ವಿಚಾರ ಮುಂದಿಟ್ಟುಕೊಂಡು ಸಾಲ ಮರುಪಾವತಿಸದೇ ಇರುವುದರಿಂದ ಬ್ಯಾಂಕ್‌ನ ಸಾಲ ವಸೂಲಾತಿ ಸಂಕಷ್ಟಕ್ಕೀಡಾಗಿದ್ದು, ರೈತರಿಗೆ ಸಾಲ ವಸೂಲಾತಿಗಾಗಿ ನೋಟಿಸ್ ನೀಡುವುದು ಅನಿವಾರ್ಯವಾಗಲಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಹನುಮಂತೇಗೌಡ ತಿಳಿಸಿದ್ದಾರೆ.
ಪಿಕಾರ್ಡ್ ಬ್ಯಾಂಕ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 172 ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ಆದರೆ, ರಾಜ್ಯ ಸಾಲಮನ್ನಾ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ರೈತರ ಸಾಲಮನ್ನಾ ಯೋಜನೆಯ ಲಾಭ ಪಿಕಾರ್ಡ್ ಬ್ಯಾಂಕ್ ಗಳಿಗೆ ಇಲ್ಲವಾಗಿದೆ. ನಮ್ಮ ಬ್ಯಾಂಕ್‌ನಲ್ಲಿಯೂ ಸಹ ರೇಷ್ಮೆ, ಮಾವು, ಬಾಳೆ ಮೊದಲಾದ ಬೆಳೆಗಳಿಗೆ ಸಾಲ ನೀಡಲಾಗಿದ್ದರೂ ಯಾವುದೇ ಸಾಲಮನ್ನಾ ಆಗಿಲ್ಲ. ಡಿಸಿಸಿ ಬ್ಯಾಂಕ್‌ಗಳಿಗೆ, ವಾಣಿಜ್ಯ ಬ್ಯಾಂಕ್ ಗಳಿಗೆ ಸಾಲಮನ್ನಾ ಮಾಡಲಾಗಿದ್ದು, ಪಿಕಾರ್ಡ್ ಬ್ಯಾಂಕ್‌ಗೆ ಇದುವರೆವಿಗೂ ಸಾಲಮನ್ನಾ ಆಗಿಲ್ಲ. ವೈದ್ಯನಾಥನ್ ವರದಿ ಜಾರಿ ಮಾಡಿದಾಗಲೂ ಡಿಸಿಸಿ ಬ್ಯಾಂಕ್‌ಗಳಿಗೆ ಲಾಭವಾಯಿತೇ ಹೊರತು ನಮ್ಮ ಬ್ಯಾಂಕ್‌ಗಳಿಗೆ ಆಗಿಲ್ಲ. ಸರ್ಕಾರ ಈಗ ಚಾಲ್ತಿ ಸಾಲ ಸಹ ಮನ್ನಾ ಮಾಡುತ್ತೇವೆ ಎನ್ನುತ್ತಿದ್ದು, ಇದರಿಂದ ಪಿಕಾರ್ಡ್ ಬ್ಯಾಂಕ್ ಗಳಲ್ಲಿ ಸಾಲ ವಸೂಲಿ ಮಾಡಲಾಗುತ್ತಿಲ್ಲ ಎಂದು ಹೇಳಿದರು.
ಶೇ.3 ಸಾಲದ ವಸೂಲಿ ಇನ್ನೂ ಸಂಕಷ್ಟ: ಶೇ.3ರ ಬಡ್ಡಿ ದರದಲ್ಲಿ ರಾಜ್ಯ ಸರ್ಕಾರ ರೈತರಿಗೆ ನೀಡಿರುವ ಸಾಲ ವಸೂಲಾತಿಯೂ ಸಹ ಕಷ್ಟವಾಗಿದೆ ಎಂದು ಸಾಲದ ಕುರಿತು ಮಾಹಿತಿ ನೀಡಿದ ಅವರು, ಮಾರ್ಚ್31, 2018ಕ್ಕೆ ಸಣ್ಣ ನೀರಾವರಿ, ಕೃಷಿ ಯಾಂತ್ರೀಕರಣ, ತೊಟಗಾರಿಕೆ, ರೇಷ್ಮೆ, ವಿವಿಧೋದ್ದೇಶಕ್ಕಾಗಿ ಒಟ್ಟು 826.54 ಲಕ್ಷ ರೂ ಸಾಲ ನೀಡಿದ್ದು, ಬರೀ 238.38 ಲಕ್ಷ ಅಂದರೆ ಶೇ.28.84ರಷ್ಟು ವಸೂಲಾಗಿದೆ.
ಸತತ ನಷ್ಟ: 2016-17ರ ಸಾಲಿನಿಂದಲೂ ಸಾಲ ವಸೂಲಾತಿಯಾಗದೆ ಹೊಸ ಸಾಲ ನೀಡಲು ಆಗುತ್ತಿಲ್ಲ. ನಿಯಮದಂತೆ ಶೇ.70ರಷ್ಟು ಸಾಲ ವಸೂಲಾಗಬೇಕು.ಆದರೆ ಕಳೆದ ಸಾಲಿನ ಆರ್ಥಿಕ ವರ್ಷದಲ್ಲಿ ತಾತ್ಕಾಲಿಕ ತಗಾದೆಯು, 945.75 ಲಕ್ಷ ರೂ. ರಷ್ಟು ಇದ್ದು, ಕಳೆದ ಸಾಲಿಗಿಂತ 357.59 ಲಕ್ಷ ರೂ. ಹೆಚ್ಚಾಗಿದ್ದು, ಬ್ಯಾಂಕ್ ಸತತ ನಷ್ಟ ಅನುಭವಿಸುತ್ತಿದೆ.
ಸರ್ಕಾರದ ನಿಯಮಾನುಸಾರ ಶೇ.3ರ ಬಡ್ಡಿ ದರದಲ್ಲಿ ಸಲ ಪಡೆದವರು 1ವರ್ಷದೊಳಗಾಗಿ ಪಾವತಿಸಿದರೆ ಮಾತ್ರ ಸೌಲಭ್ಯಕ್ಕೆ ಅರ್ಹರು. ಅವರು ಸಕಾಲದಲ್ಲಿ ಸಾಲ ಪಾವತಿಸದಿದ್ದರೆ ಶೇ.11 ಹೆಚ್ಚುವರಿಯಾಗಿ ವಸೂಲು ಮಾಡಬೇಕಾಗುತ್ತದೆ. ರೈತರು ಚಾಲ್ತಿ ಕಂತುಗಳನ್ನು ಮಾ. 31ರೊಳಗೆ ಪಾವತಿಸದಿದ್ದರೆ ಸರ್ಕಾರದಿಂದ ದೊರೆಯುವ ಶೇ.9.5ರ ರಿಯಾಯ್ತಿ ಸಿಗುವುದಿಲ್ಲ. ರೈತರು ಶೇ. 14ರಷ್ಟು ದರದಲ್ಲಿ ಬಡ್ಡಿ ಕಟ್ಟಬೇಕಾಗುತ್ತದೆ. ಸಾಲ ವಸೂಲಾತಿಯಾಗದೇ ಬ್ಯಾಂಕ್ ವಹಿವಾಟುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಾಲ ವಸೂಲಾತಿಗಾಗಿ ಇನ್ನು 15 ದಿನಗಳಲ್ಲಿ ರೈತರಿಗೆ ನೋಟಿಸ್ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಪುಟ್ಟಬಸವರಾಜು, ನಿರ್ದೇಶಕರಾದ ಎನ್.ಜಯರಾಂ, ಜಯರಾಂ ನಾಯಕ್, ರೇಣುಕಮ್ಮ, ಬಸವೇಗೌಡ,ರೇಣುಕಮ್ಮ,ಶಶಿಧರ್,ಹೇಮಾವತಿ ಹಾಜರಿದ್ದರು.