Advertisement

ರೈತ ಮಹಿಳೆಗೆ ನೋಟಿಸ್‌

06:00 AM Nov 21, 2018 | Team Udayavani |

ವಿಜಯಪುರ: ಸಹಕಾರಿ ಬ್ಯಾಂಕ್‌ಗಳಿಂದ ಯಾವ ಸಾಲಗಾರರಿಗೂ ಸಾಲ ಮರುಪಾವತಿಗೆ ನೋಟಿಸ್‌ ನೀಡಿಲ್ಲ ಎಂದು ಸಿಎಂ ಕುಮಾರ ಸ್ವಾಮಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ರೈತ ಮಹಿಳೆಯೊಬ್ಬರಿಗೆ
ಕಟ್‌ ಬಾಕಿದಾರರೆಂದು ನೋಟಿಸ್‌ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದಿದ್ದ ಗೌರಾಬಾಯಿ ಗೌಡಪ್ಪ ಪಾಟೀಲ ಎಂಬ ರೈತ ಮಹಿಳೆಗೆ ನ. 15ರಂದು ಸಾಲ ಮರುಪಾವತಿಸಲು ನೋಟಿಸ್‌ ನೀಡಲಾಗಿದೆ. ಕೃಷಿ ಮಹಿಳೆ ಪಡೆದಿರುವ 29,200 ರೂ.ಸಾಲದ ಅಸಲು, 3,072 ರೂ.ಬಡ್ಡಿ ಸೇರಿ
30-11-2018ಕ್ಕೆ ಒಟ್ಟು 31,872 ರೂ.ಆಗಿದೆ. ಈ ನೋಟಿಸ್‌ ಮುಟ್ಟಿದ 7 ದಿನಗಳಲ್ಲಿ ಅಸಲು, ಬಡ್ಡಿ, ದಂಡದ ಬಡ್ಡಿ, ಇತರ ಖರ್ಚನ್ನೆಲ್ಲ ಭರಿಸುವಂತೆ ನೋಟಿಸ್‌ನಲ್ಲಿ ವಿವರಿಸಲಾಗಿದೆ.  ಒಂದೊಮ್ಮೆ, ನೋಟಿಸ್‌ ತಲುಪಿದ 7 ದಿನಗಳಲ್ಲಿ ಸಾಲ ಮರುಪಾವತಿ ಸದಿದ್ದರೆ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ಕಲಂ-70ರಂತೆ ಪಂಚಾಯತ್‌ ದಾವೆ ಹೂಡಲಾಗುತ್ತದೆ. ಅಲ್ಲದೆ, ಕೋರ್ಟ್‌ ಖರ್ಚು ವೆಚ್ಚಕ್ಕೆ ನೀವೇ ಜವಾಬ್ದಾರಿ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ. ನೋಟಿಸ್‌ನಲ್ಲಿ ನ.15 ಎಂದು ದಿನಾಂಕ ನಮೂದಿಸಿದ್ದರೂ ನೋಟಿಸ್‌ ನೀಡಿದ್ದು ಮಾತ್ರ ನ. 19ರಂದು. ನೋಟಿಸ್‌ ತಲುಪುವ ಮುನ್ನ ಸಹಕಾರಿ ಬ್ಯಾಂಕ್‌ ಅಧಿಕಾರಿ-ಸಿಬ್ಬಂದಿ ಕಂಡಲೆಲ್ಲ ಸಾಲ ಮರುಪಾವತಿಗೆ ಪೀಡಿಸುತ್ತಿದ್ದಾರೆ ಎಂದು ನೋಟಿಸ್‌ ಪಡೆದಿರುವ ಕೃಷಿ ಮಹಿಳೆಯ ಮಗ ಧನ್ಯಕುಮಾರ ಪಾಟೀಲ ದೂರಿದ್ದಾರೆ.

Advertisement

ಸದರಿ ಬ್ಯಾಂಕ್‌ನಿಂದ ಪಡೆದ ಸಾಲದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲ ಮನ್ನಾ ಹಣ 36 ಸಾವಿರ ರೂ.ನಲ್ಲಿ 28 ಸಾವಿರ ರೂ. ಗಳನ್ನು ಜಮೆ ಮಾಡಿಕೊಂಡಿದ್ದಾರೆ. ಅಲ್ಲದೆ, ಎರಡು ಪ್ರತ್ಯೇಕ ವಿಷಯದಲ್ಲಿ 8 ಸಾವಿರ ರೂ.ಠೇವಣಿ ಇರಿಸಿ ಕೊಂಡಿದ್ದಾರೆ. 1 ಸಾವಿರ ರೂ.ಕಟ್ಟಡ ಶುಲ್ಕ ಎಂದು ಕಡಿತ ಮಾಡಿದ್ದಾರೆ. ಇದರ ಹೊರತಾಗಿಯೂ ನಾವು ಬ್ಯಾಂಕ್‌ನಲ್ಲಿ ಕಟ್ಟಿರುವ ಪಿಗ್ಮಿ ಹಣ ಹಾಗೂ ಠೇವಣಿ ಹಣವನ್ನು ನಮ್ಮ ಸಾಲಕ್ಕೆ ಜಮೆ ಮಾಡಿಕೊಳ್ಳುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸದೆ ಕಿರುಕುಳ ನೀಡಲಾಗುತ್ತಿದೆ ಎಂದು ಗೌರಾಬಾಯಿ ಅವರ ಮಗ ಧನ್ಯಕುಮಾರ ದೂರಿದ್ದಾರೆ. ಆದರೆ, ಈ ಆರೋಪವನ್ನು ಸಂಘ ಅಲ್ಲಗಳೆದಿದೆ. ಹಡಗಲಿ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ಸದರಿ ಕೃಷಿ ಮಹಿಳೆ ನಮ್ಮ ಬಳಿ ಕೃಷಿ ಹಾಗೂ ಕೃಷಿಯೇತರ ಕೆಲಸಕ್ಕೆ ಎರಡು ಸಾಲ ಪಡೆದಿದ್ದಾರೆ.

ಕೃಷಿಯೇತರ ಸಾಲದ ಕಾಲ ಮಿತಿ ಮೀರಿರುವ ಕಾರಣ ಸಹಕಾರಿ ಬ್ಯಾಂಕ್‌ ನಿಯಮದಂತೆ ನೋಟಿಸ್‌ ನೀಡಲಾಗಿದೆ. ಇದರ ಹೊರತು ಕೃಷಿ ಅಥವಾ ಬೆಳೆ ಸಾಲಕ್ಕಲ್ಲ. ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್‌ ಸೂಚನೆ ಮೇರೆಗೆ ಠೇವಣಿ ಸಂಗ್ರಹಿಸಲಾಗಿದೆ. ನಮ್ಮ ಸಹಕಾರಿ ಸಂಘಕ್ಕೆ ನಮ್ಮ ಅವಧಿಯಲ್ಲಿ ಕಟ್ಟಡ ನಿರ್ಮಿಸುವ ಸಲುವಾಗಿ ಸಹಕಾರಿ ಸಂಘದಲ್ಲಿರುವ 960 ಸಹಕಾರಿ ಸದಸ್ಯರಲ್ಲಿ 945 ಸದಸ್ಯರು ಮಾತ್ರ ಕಟ್ಟಡ ಶುಲ್ಕ ನೀಡಿದ್ದರು. ಕೆಲವರು ತಕರಾರು ತೆಗೆದ ಕಾರಣ ಎಲ್ಲ ಸದಸ್ಯರಿಗೂ ಇದೀಗ ಕಟ್ಟಡ ಶುಲ್ಕ ಸಂಗ್ರಹದ
ಹಣವನ್ನು ಮರುಪಾವತಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೃಷಿ ರಹಿತ ಸಾಲ ಪಡೆದವರಿಗೆ ಕಾಲಮಿತಿ ಮೀರಿದ್ದರಿಂದ ಕಾನೂನಾತ್ಮಕವಾಗಿ ನೋಟಿಸ್‌ ನೀಡಲಾಗಿದೆ. ಕೃಷಿಗೆ ಸಾಲ ಪಡೆದಿರುವ ಯಾವ ರೈತರಿಗಾಗಲಿ, ರೈತ ಮಹಿಳೆಯರಿ ಗಾಗಲಿ ಸಾಲ ಮರುಪಾವತಿಗೆ ನೋಟಿಸ್‌ ನೀಡಿಲ್ಲ. 
ಅಶೋಕ ಪಾಟೀಲ,ಅಧ್ಯಕ್ಷರು, ಪ್ರಾ.ಕೃ.ಸ. ಸಂಘ, ಹಡಗಲಿ.

Advertisement

Udayavani is now on Telegram. Click here to join our channel and stay updated with the latest news.

Next