ಹುಮನಾಬಾದ: ಚಿಟಗುಪ್ಪ ಹಾಗೂ ಹುಮನಾಬಾದ ತಾಲೂಕಿನಲ್ಲಿನ 57 ಅನುದಾನ ರಹಿತ ಖಾಸಗಿ ಶಾಲೆಗಳ ಪೈಕಿ 27 ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ ಕಂಡು ಬಂದಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಚಿಟಗುಪ್ಪ ತಾಲೂಕಿನ ಮನ್ನಾಎಖೇಳ್ಳಿ ಹತ್ತಿರದ ಶಾಲೆಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ತಗಡಿನ ಶೆಡ್‌ನಲ್ಲಿ ಶಾಲೆ
ನಡೆಸುತ್ತಿರುವುದು ಗಮನಿಸಿ ಶಿಕ್ಷಣ ಇಲಾಖೆ ಅ ಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು.
ತಗಡಿನ ಶೆಡ್‌ನಲ್ಲಿ ಮಕ್ಕಳು ಹೇಗೆ ಕುಳಿತು ವಿದ್ಯಾಭ್ಯಾಸ ಮಾಡಬೇಕು? ಎಂದು ಪ್ರಶ್ನಿಸಿದ್ದರು. ಯಾವ ಶಾಲೆಗಳಿಗೆ ಮೂಲ ಸೌಕರ್ಯ ಇಲ್ಲ ಎಂಬುದನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಅದರಂತೆ ಶಿಕ್ಷಣ ಇಲಾಖೆ ಅ ಧಿಕಾರಿಗಳು ವಿವಿಧ ಶಾಲೆಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಿ ಶಾಲೆಗಳಲ್ಲಿನ ಮೂಲ ಸೌಕರ್ಯ ಕುರಿತು ಮಾಹಿತಿ ಪಡೆದು, 27 ಶಾಲೆಗಳಿಗೆ ಇದೀಗ ನೋಟಿಸ್ ಜಾರಿ ಮಾಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗುಂಡಪ್ಪ ಸಿದ್ದಣಗೊಳ್ ಮಾಹಿತಿ ನೀಡಿದ್ದಾರೆ.
ಸೌಲಭ್ಯಗಳ ಕೊರತೆ: ಶಾಲೆ ಸ್ವಂತ ಕಟ್ಟಡ ಅಥವಾ ಲೀಸ್ ಕಟ್ಟಡದಲ್ಲಿ ಪರವಾನಗಿ ಪಡೆದು ನಡೆಸಲು ನಿಯಮವಿದೆ. ಆದರೆ, ಕೆಲ ಶಾಲಾ ಆಡಳಿತ ಮಂಡಳಿಗೆ ಯಾವುದೇ ಸ್ವಂತ ಕಟ್ಟಡವಿಲ್ಲ. ತಗಡಿನ ಶೆಡ್‌ನಲ್ಲಿ ಶಾಲೆಗಳು ನಡೆಸುತ್ತಿರುವುದು ಕಂಡು ಬಂದಿದೆ. ಶಾಲಾ ಆರಂಭವಾದ 3 ವರ್ಷದೊಳಗೆ ಅಗತ್ಯ ಸೌಕರ್ಯ ಒದಗಿಸಿಕೊಳ್ಳಬೇಕೆಂಬ ನಿಯಮ ಇದೆ. ಆದರೆ ಇಲ್ಲಿನ ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಗಾಳಿಗೆ ತೂರಿ ತರಗತಿ ನಡೆಸುತ್ತಿವೆ. ಅಲ್ಲದೆ, ಒಂದೆಡೆ ಶಾಲೆ ನಡೆಸಲು ಪರವಾನಗಿ ಪಡೆದ ನಂತರ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕಾದರೂ ನಿಯಮ ಇದೆ. ಈಗಾಗಲೇ ಕೆಲ ಶಾಲೆಗಳು ಬೇರೆ ಸ್ಥಳದಲ್ಲಿ ನಡೆಸುವ ಮೂಲಕ ಮಾನದಂಡ ಉಲ್ಲಂಘಿಸುತ್ತಿವೆ. ಶಾಲಾ ಆವರಣದಲ್ಲಿ ಆಟದ ಮೈದಾನ, ಸೂಕ್ತ ವ್ಯವಸ್ಥೆ ಹೊಂದಿದ ವರ್ಗ ಕೋಣೆಗಳು, ಸೂಕ್ತ ಪದವಿ ಹೊಂದಿದ ಶಿಕ್ಷಕರು, ಕುಡಿವ ನೀರು, ಶೌಚಾಲಯ ಸೇರಿದಂತೆ ಇತರೆ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿ ಕಾರಿಗಳು
ಮಾಹಿತಿ ನೀಡಿದ್ದಾರೆ.
ಶಿಕ್ಷಣ ಸಚಿವರು ಚಿಟಗುಪ್ಪ ತಾಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೂಚಿಸಿದಂತೆ ಕಳೆದ ಕೆಲ ತಿಂಗಳಿಂದ ವಿವಿಧ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದೆ. ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಂಡು ಬಂದ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹುಮನಾಬಾದ-ಚಿಟಗುಪ್ಪ ತಾಲೂಕಿನ 57 ಅನುದಾನ ರಹಿತ ಶಾಲೆಗಳ ಪೈಕಿ 27 ಶಾಲೆಗಳಿಗೆ ನೋಟಿಸ್ ನೀಡಿದ್ದು, ಅದಕ್ಕೆ ಉತ್ತರ ಬರಬೇಕಿದೆ.
ಶಿವಗುಂಡಪ್ಪ ಸಿದ್ದಣಗೊಳ್,
ಕ್ಷೇತ್ರ ಶಿಕ್ಷಣಾಧಿಕಾರಿ, ಹುಮನಾಬಾದ್