ಬಾದಾಮಿ: ಉತ್ತರ ಕರ್ನಾಟಕದ ಸುಪ್ರಸಿದ್ದ ಬಾದಾಮಿ ಬನಶಂಕರಿ ಜಾತ್ರೆ ಜ.3ರಿಂದ ಆರಂಭವಾಗಲಿದ್ದು, 10ರಂದು ಮಹಾರಥೋತ್ಸವ ಜರುಗಲಿದೆ. ನಿರಂತರ ಒಂದು ತಿಂಗಳು ನಡೆಯುವ ಜಾತ್ರಾ ಮಹೋತ್ಸವ ವೇಳೆ ಭಕ್ತರಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ತಹಶೀಲ್ದಾರ್ ಸುಹಾಸ ಇಂಗಳೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ತಾಪಂ ಸಭಾಭವನದಲ್ಲಿ ಬನಶಂಕರಿ ಜಾತ್ರೆ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರೆಗೆ ಬರುವ ಭಕ್ತರಿಗೆ ಮತ್ತು ಅಂಗಡಿಕಾರರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಅಭಿಯಂತರರಿಗೆ ತಿಳಿಸಿದರು.
ಚೊಳಚಗುಡ್ಡದಿಂದ ಬನಶಂಕರಿವರೆಗೆ ತಾತ್ಕಾಲಿಕ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಾದಾಮಿಯಿಂದ ಕಲುಷಿತ ನೀರು ಹೊಂಡಕ್ಕೆ ಬರದಂತೆ ತಡೆಗಟ್ಟಿ ಎಂದು ಬನಶಂಕರಿ ಟ್ರಸ್ಟ್ ಕಮಿಟಿಯವರು ಮನವಿ ಮಾಡಿದರು. ಆಗ ಪುರಸಭೆ ಅಧಿ ಕಾರಿ ಮಲಕನ್ನವರಿಗೆ ಈ ಕುರಿತು ಕ್ರಮತೆಗೆದುಕೊಳ್ಳಲು ಸೂಚಿಸಿದರು. ಜಾತ್ರೆ ಮುಗಿದ ನಂತರ ಸ್ವತ್ಛತೆ ಮಾಡಲು ಆಯಾ ಜವಾಬ್ದಾರರೇ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಯಿತು.
ಸರಕಾರದ ನಿರ್ದೇಶನದಂತೆ ಜಾತ್ರೆಯಲ್ಲಿ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟು ಜಾರಿ ಮಾಡಬೇಕು. ಈ ಕುರಿತು ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಬ್ಯಾನರ್ ಮೂಲಕ ವ್ಯಾಪಕ ಪ್ರಚಾರ ಮಾಡಲು ಸೂಚನೆ ನೀಡಲಾಯಿತು. ಆಟೋ ಮೂಲಕ ಭಕ್ತರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಸ್ವಾಗತ ಕಮಾನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ: ತಾಲೂಕು ಆರೋಗ್ಯಾಧಿಕಾರಿ ಎಂ.ಎನ್. ಪಾಟೀಲ ಮಾತನಾಡಿ, ಆರೋಗ್ಯ ಇಲಾಖೆ ಮೂರು ಕೇಂದ್ರ ನಿರ್ವಹಣೆ ಮಾಡಲಾಗುತ್ತಿದೆ. 24ಗಿ7 ಕಾರ್ಯನಿರ್ವಹಣೆ, ಮುನ್ನಚ್ಚರಿಕೆ ಕ್ರಮ, ಮಾಹಿತಿ ನೀಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನೆರೆ ಪ್ರವಾಹದಿಂದ ಔಷಧ ಕಡಿಮೆ ಇದೆ. ಇದನ್ನು ಗ್ರಾಪಂ ಮಟ್ಟದಲ್ಲಿ ನಿರ್ವಹಣೆ ಮಾಡಲು ತಿಳಿಸಲಾಯಿತು. ಔಷಧ ಬೇಡಿಕೆ ಸಲ್ಲಿಸಲು ತಾಪಂ ಇಒ ಡಾ| ಪುನೀತ್ ಸೂಚನೆ ನೀಡಿದರು. ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಎಲ್ಲ ಅಂಗಡಿ, ನಾಟಕ, ಸಿನಿಮಾ ಅಂಗಡಿಗಳನ್ನು ತಪಾಸಣೆ ಮಾಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಚಾರ ವ್ಯತ್ಯಯ, ಪಾರ್ಕಿಂಗ್ ಬಗ್ಗೆ ಪೋಲಿಸ್ ಇಲಾಖೆ ಮುತುವರ್ಜಿ ವಹಿಸಬೇಕು. ಬನಶಂಕರಿದೇವಿ ಜಾತ್ರೆಗೆ ಭಕ್ತರು ಬರಲು ಅನುಕೂಲವಾಗುವಂತೆ ನಾಲ್ಕು ದಿಕ್ಕಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಅಂಗಡಿಕಾರರಿಗೆ ಹಿಂದಿನ ವರ್ಗಗಳಂತೆ ಅಂಗಡಿ ಬಾಡಿಗೆ ಆಕರಣೆ ಮಾಡಲು ತಿಳಿಸಲಾಯಿತು. ಬನಶಂಕರಿದೇವಿ ಜಾತ್ರೆಗೆ ಭಕ್ತರ ಅನುಕೂಲಕ್ಕಾಗಿ 25 ಬಸ್ ಸೌಲಭ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಅಧಿಕಾರಿ ಮಡಿವಾಳರ ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಡಾ| ಎಂ.ಎಚ್. ಚಲವಾದಿ, ತಾಪಂ ಇಒ ಡಾ| ಪುನೀತ ಬಿ.ಆರ್, ಚೊಳಚಗುಡ್ಡ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಳಸನ್ನವರ, ಉಪಾಧ್ಯಕ್ಷೆ ಅನುರಾಧಾ ದೊಡಮನಿ, ಬನಶಂಕರಿ ಟ್ರಸ್ಟ್ ಕಮಿಟಿ ಸದಸ್ಯರು ಇದ್ದರು. ವಿಜಯ ಕೋತಿನ ಸ್ವಾಗತಿಸಿದರು.