ಚಿಂಚೋಳಿ: ತಾಲೂಕಿನ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳ ನಿರ್ಲಕ್ಷತನ ಹೆಚ್ಚಾಗಿದೆ. ತುರ್ತು ಪರಸ್ಥಿತಿಯಲ್ಲಿ ಕರೆಯಲಾದ ಸಭೆಗಳಿಗೆ ಅಧಿಕಾರಿಗಳು ಹಾಜರಾಗದೇ ಇರುವುದು ಸರಿಯಾದ ಕ್ರಮವಲ್ಲ. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಾಪಂ ಇಒ ಅನಿಲಕುಮಾರ ರಾಠೊಡ ಎಚ್ಚರಿಕೆ ನೀಡಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾಜ ಕಲ್ಯಾಣ ಇಲಾಖೆ 2021-22ನೇ ಸಾಲಿನ ಎಸ್ ಸಿಪಿ/ಟಿಎಸ್‌ಪಿ ಯೋಜನೆಗಳಲ್ಲಿ ಕೈಗೊಂಡ ಕಾಮಗಾರಿಗಳ ಅನುಷ್ಠಾನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಸಭೆ ನಡೆಯುವ ಬಗ್ಗೆ ಒಂದು ದಿನ ಮೊದಲೇ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾರು ಸಭೆಗೆ ಬರುವುದಿಲ್ಲ. ಇದರಿಂದ ಸಭೆ ನಡೆಸುವುದಾದರು ಯಾಕೆ? ಸಭೆ ನಡೆಸುವ ಅರ್ಥವೇ ಇಲ್ಲ. ಸರಕಾರಿ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬರುವುದಕ್ಕಾಗಿ ಅಧಿಕಾರಿಗಳೆಲ್ಲರೂ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು.
ತಹಶೀಲ್ದಾರ್ ಅಂಜುಮ ತಬಸುಮ ಮಾತನಾಡಿ, ಕಂದಾಯ ಇಲಾಖೆ ಅತೀ ಮಹತ್ವದ ಕೆಲಸ ಬಿಟ್ಟು ಸಭೆಗೆ ಹಾಜರಾಗಿದ್ದೇನೆ. ಆದರೆ ಯಾರು ಸಭೆಗೆ ಹಾಜರಾಗದೇ ನಿರ್ಲಕ್ಷತನ ಮಾಡಿದ ಅಧಿಕಾರಿಗಳಿಗೆ ನೋಟಿಸು ನೀಡಬೇಕು. ಮಳೆಗಾಲ ಪ್ರಾರಂಭ ಆಗಿರುವುದರಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ಬರುತ್ತಿದೆ. ಎಲ್ಲ ಅಧಿಕಾರಿಗಳು ಅಲರ್ಟ ಆಗಿರಬೇಕು ಸೂಚನೆ ನೀಡಿದರು.
ಪಿಆರ್‌ಇ ಎಇಇ ಅಹೆಮದ ಹುಸೇನ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಎಇಇ ಶಿವಶರಣಪ್ಪ ಕೇಶ್ವಾರ ಮಾತನಾಡಿದರು. ಮೇ 27ರಂದು ನಿಡಗುಂದಾ ಗ್ರಾಮದಲ್ಲಿ ಸೇಡಂ ಶಾಸಕರು ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಅಧಿಕಾರಿಗಳು ಭಾಗವಹಿಸಬೇಕು ಎಂದು ತಹಶೀಲ್ದಾರರು ತಿಳಿಸಿದರು.
ಆರೋಗ್ಯಾಧಿಕಾರಿ ಡಾ| ಮಹಮ್ಮದ ಗಫಾರ, ಎಇಇ ಪ್ರಕಾಶ ಕುಲಕರ್ಣಿ, ಬಿಸಿಎಂ ಅಧಿಕಾರಿ ಶಾಂತವೀರಯ್ಯ ಹಿರೇಮಠ, ಅರಣ್ಯ ಇಲಾಖೆ ಸಿದ್ದಾರೂಢ ಹೊಕ್ಕುಂಡಿ, ಅನುಸೂಯಾ ಚವ್ಹಾಣ, ಜೆಇ ಗಿರಿರಾಜ ಸಜ್ಜನಶೆಟ್ಟಿ ಇದ್ದರು.