Advertisement

ಒಗ್ಗಟು ತೋರಲು ಜಿಲ್ಲಾ ಘಟಕಗಳಿಗೆ ಸೂಚನೆ

08:27 AM Nov 06, 2017 | Team Udayavani |

ಬೆಂಗಳೂರು: ನಗರದಲ್ಲಿ ನಡೆದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ಘಾಟನೆ ವೇಳೆ ಜನರನ್ನು ಸೇರಿಸುವಲ್ಲಿ ವಿಫ‌ಲರಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ತರಾಟೆಗೊಳಗಾದ ರಾಜ್ಯ ಬಿಜೆಪಿ ನಾಯಕರು ಇದೀಗ ಒಗ್ಗಟ್ಟಿನ ಮಂತ್ರ
ಪಠಿಸಲಾರಂಭಿಸಿದ್ದಾರೆ. ಯಾತ್ರೆ ಬರುವ ವೇಳೆ ಎಲ್ಲರೂ ಒಟ್ಟಾಗಿ ಯಶಸ್ವಿಗೊಳಿಸುವಂತೆ ಎಲ್ಲಾ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಿದ್ದಾರೆ.

Advertisement

ಇದರ ಪರಿಣಾಮ ಆರಂಭದಲ್ಲೇ ಗೋಚರವಾಗಿದ್ದು, ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಾಗಿದೆ. ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಯಾತ್ರೆಯಿಂದ ದೂರವಿದ್ದರೂ ಸಂಘಟನೆ ಮಾತ್ರ ಒಗ್ಗಟ್ಟು ಪ್ರದರ್ಶಿಸಿತು. ಇದರಿಂದ ಪಕ್ಷದ ನಾಯಕರಲ್ಲೂ ಹೊಸ ಹುರುಪು ಬಂದಂತಾಗಿದೆ. ಹಾಸನ ಜಿಲ್ಲೆ ಮುಗಿದ ಬಳಿಕ ಯಾತ್ರೆ ಮಡಿಕೇರಿ ಮೂಲಕ ಕರಾವಳಿ ಜಿಲ್ಲೆಗೆ ಕಾಲಿಡುತ್ತದೆ. ಅದೇ ಸಂದರ್ಭದಲ್ಲಿ ಟಿಪ್ಪು ಜಯಂತಿ ಕೂಡ ಇರುವುದರಿಂದ ಟಿಪ್ಪು ಜಯಂತಿ ವಿರೋಧಿಸಿ ಯಾತ್ರೆಗೆ ಭಾರೀ ಪ್ರಮಾಣದ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಈ ನಿರೀಕ್ಷೆ ನಿಜವಾದರೆ ಅದೇ ವೇಗವನ್ನು ರಾಜ್ಯದ ಇತರೆಡೆಗಳಲ್ಲೂ ಮುಂದುವರಿಸಲು ನಾಯಕರು ತೀರ್ಮಾನಿಸಿದ್ದಾರೆ. ಅದಕ್ಕಾಗಿ ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಇನ್ನಷ್ಟು ಹೊಸ ಆರೋಪಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ  ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆಂಬ ಕಾರಣಕ್ಕೆ ಪಕ್ಷದಲ್ಲಿ ಅಸಮಾಧಾನ ಕಾಣಿಸಿಕೊಂಡಿತ್ತು. ಇದನ್ನು ತಣಿಸಲು ಆರಂಭದಲ್ಲೇ ಕ್ರಮ ಕೈಗೊಳ್ಳದ ಕಾರಣ ಅದು ತೀವ್ರ ಸ್ವರೂಪ ಪಡೆದು ನಾಯಕರು ಉತ್ತರ-ದಕ್ಷಿಣದಂತಾಗಿದ್ದರು. ಆದರೆ, ಕಳೆದ ಆಗಸ್‌ rನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಂದು ಎಚ್ಚರಿಕೆ ಕೊಟ್ಟು ಹೋದ ನಂತರ ಆರಂಭದಲ್ಲಿ ಒಗ್ಗಟ್ಟು ಕಾಣಿಸಿಕೊಂಡಿತಾದರೂ ಮತ್ತೆ ಅಸಮಾಧಾನ ಮುಂದುವರಿದಿತ್ತು. ಇದರ ಪರಿಣಾಮ ಪರಿವರ್ತನಾ
ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅಮಿತ್‌ ಶಾ ಅವರಿಂದ ಮತ್ತೆ ನಾಯಕರೆಲ್ಲ ತರಾಟೆಗೊಳಗಾಗುವಂತಾಯಿತು.

ಬಿಎಸ್‌ವೈ-ಸಂತೋಷ್‌ ಬಣ ಒಂದು: ಹೀಗಾಗಿ ಮತ್ತೆ ಅಸಮಾಧಾನಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ಪಕ್ಷದ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆ ಉದ್ಘಾಟನೆ ಬಳಿಕ ಯಡಿಯೂರಪ್ಪ ಮತ್ತು ಬಿ.ಎಲ್‌.
ಸಂತೋಷ್‌ ಪರಸ್ಪರ ಕೈ ಹಿಡಿದುಕೊಂಡು ರಥ ಏರುವ ಮೂಲಕ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಒಗ್ಗಟ್ಟು ಪ್ರದರ್ಶನದ ಸೂಚನೆ ಪಕ್ಷದ ರಾಜ್ಯ ಘಟಕದಿಂದ ಎಲ್ಲಾ ಜಿಲ್ಲೆಗಳಿಗೆ ಹೋಗಿದೆ ಎಂದು ಹೇಳಲಾಗಿದೆ. 2018ರ ಜ.28ರಂದು ಬೆಂಗಳೂರಿನಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಅಷ್ಟರ ವೇಳೆಗೆ ರಾಜ್ಯದಲ್ಲಿ ಬಿಜೆಪಿ ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ಅವರಿಗೆ ತಲುಪಿಸಲು ಪಕ್ಷ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಒಂದೊಂದೇ ವಿಚಾರ ಪ್ರಸ್ತಾಪಿಸಲು ನಿರ್ಧಾರ
ಯಾತ್ರೆ ಹಾಸನದಿಂದ ಕೊಡಗು ಜಿಲ್ಲೆಗೆ ತೆರಳಿದ ನಂತರ ಸರ್ಕಾರದ ವಿರುದ್ಧ ಪ್ರಮುಖ ವಾಗಿ ಟಿಪ್ಪು ಜಯಂತಿ ವಿಚಾರ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಈ ಮಧ್ಯೆ ನ.13ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಆರಂಭಿಸಿರುವುದರಿಂದ ಸಚಿವ ಜಾರ್ಜ್‌ ರಾಜೀನಾಮೆಗೆ ಸದನದಲ್ಲಿ ಬಿಜೆಪಿ ಒತ್ತಾಯಿಸಲಿದೆ.
ಇದರೊಂದಿಗೆ ಯಾತ್ರೆಯಲ್ಲೂ ಆ ವಿಚಾರವನ್ನು ಪ್ರಧಾನವಾಗಿ ಪ್ರಸ್ತಾಪಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ. ಯಾತ್ರೆ ಎಲ್ಲೆಲ್ಲಿ ತೆರಳುತ್ತದೋ ಅಲ್ಲಿನ ಸ್ಥಳೀಯ ವಿಚಾರಗಳನ್ನೂ ಪ್ರಸ್ತಾಪಿಸಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next