ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕ್ರಮ ಕೈಗೊಂಡು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸಿ ಗ್ರಾಮೀಣ ಸಂತೆಗಳನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಭವನದಲ್ಲಿ ಜಿಪಂ ಸಿಇಒ ಫೌಝೀಯಾ ತರುನ್ನುಮ್ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ತಾಪಂ ಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ ನಡೆಸಿದ ಅವರು, ಕೋವಿಡ್ ನಿಯಂತ್ರಿಸಲು ಮತ್ತು ಜನರಿಗೆ ಅರಿವು ಮೂಡಿಸಲು ರಚಿಸಿರುವ ಕೋವಿಡ್ ಕಾರ್ಯಪಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಜಾಗೃತಿ ವಹಿಸಬೇಕು ಎಂದರು.
ತಾಪಂ ಇಒಗಳಿಗೆ ತಾಕೀತು: ಗ್ರಾಪಂ ಮಟ್ಟದಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರಗಳಿಗೆ ಸ್ವೀಕಾರವಾಗುವ ಕರೆಗಳಿಗೆ ತ್ವರಿತವಾಗಿ ಸ್ಪಂದಿಸಿ ಜನರಿಗೆ ಆತ್ಮಸ್ಥೈರ್ಯ ತುಂಬಿ ಕೋವಿಡ್ ಭೀತಿ ಹೋಗಲಾಡಿಸಬೇಕೆಂದು ತಾಪಂ ಇಒಗಳಿಗೆ ತಾಕೀತು ಮಾಡಿದರು. ಮಕ್ಕಳ-ಮಹಿಳಾ ಗ್ರಾಮಸಭೆಗಳನ್ನು ಪರಿ ಣಾಮಕಾರಿಯಾಗಿ ನಡೆಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದರು. ಮಾರಾಟಕ್ಕೆ ವ್ಯವಸ್ಥೆ: ಉದ್ಯೋಗ ಖಾತ್ರಿ ಯೋಜನೆಗಳ ಮೂಲಕ ಜಲ ಸಂರಕ್ಷಣೆ ಕಾಮಗಾರಿ ನಡೆಸಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಆದ್ಯತೆ ನೀಡಬೇಕೆಂದ ಅವರು, ಪಂಚಾಯಿತಿ ಮಟ್ಟದಲ್ಲಿ ರೈತರಿಗಾಗಿ ಗ್ರಾಮೀಣ ಸಂತೆಗಳನ್ನು ಅಭಿವೃದ್ಧಿಗೊಳಿಸಿ ರೈತರು ಬೆಳೆದಿರುವ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ನಿಗದಿತ ಅವಧಿಯಲ್ಲಿ ಪೂರ್ಣ: ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿರುವಂತೆ ಆಡಳಿತಾತ್ಮಕ ವಿಷಯ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ವಿವರವಾದ ಪ್ರಗತಿ ಪರಿಶೀಲನಾ ಸಭೆ ಕೈಗೊಂಡು ನಿಗದಿತ ಅವಧಿಯೊಳಗೆ ಪ್ರಗತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳ ತಾಪಂ ಇಒಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.