ಧಾರವಾಡ: ಒಂದು ವಾರದಿಂದ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಗಿರುವ ಹಾನಿ ಕುರಿತು ವಾಸ್ತವಿಕ ವರದಿಯನ್ನು ರವಿವಾರದೊಳಗೆ ಸಲ್ಲಿಸುವಂತೆ ಡಿಸಿ ದೀಪಾ ಚೋಳನ್ ತಹಶೀಲ್ದಾರ್‌ರು ಹಾಗೂ ವಿವಿಧ ಇಲಾಖೆ ಮುಖ್ಯಸ್ಥರಿಗೆ ಆದೇಶ ನೀಡಿದ್ದಾರೆ.
ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರ್ ಜತೆ ಶನಿವಾರ ನಡೆಸಿದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ತಾಲೂಕಿನ ತಹಶೀಲ್ದಾರ್‌ರು ಮತ್ತು ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಇಲಾಖೆಗಳ ಸ್ವತ್ತು ಹಾನಿ ಕುರಿತು ವಾಸ್ತವಿಕ ವರದಿಯನ್ನು ರವಿವಾರದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು. ಮನೆ, ರಸ್ತೆ, ಸೇತುವೆ, ಶಾಲೆ, ಬಸ್‌ನಿಲ್ದಾಣ, ಆಸ್ಪತ್ರೆ ಕಟ್ಟಡ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳ ಹಾನಿಯ ವರದಿಯನ್ನು ನೀಡಬೇಕು ಎಂದರು.
ಮಳೆ ಹಾಗೂ ನೆರೆ ಪ್ರಮಾಣ ಶುಕ್ರವಾರ ರಾತ್ರಿಯಿಂದ ಕಡಿಮೆಯಾಗಿದೆ. ಬೆಣ್ಣೆಹಳ್ಳ ತುಪ್ಪರಿಹಳ್ಳ, ಹೂಲಿಕೆರೆ ಗ್ರಾಮದ ಇಂದ್ರಮ್ಮನಕೆರೆ ಸೇರಿದಂತೆ ಪ್ರಮುಖ ಕೆರೆ-ನಾಲಾಗಳಲ್ಲಿ ಪ್ರವಾಹ ಇಳಿಮುಖವಾಗಿದೆ. ಮಳೆ ಹಾಗೂ ನೆರೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಮೂಲಸೌಕರ್ಯ ನೀಡಿ ಜನಜೀವನ ಸಹಜ ಸ್ಥಿತಿಗೆ ತರುವ ಸವಾಲು ನಮ್ಮ ಮುಂದಿದೆ. ಈಗ ಸಂತ್ರಸ್ತರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸಹಜ ಜೀವನಕ್ಕೆ ಮರಳುವಂತೆ ಮಾಡುವ ಕಾರ್ಯವಾಗಬೇಕು ಎಂದು ಹೇಳಿದರು.
ಒಂದು ವಾರದಿಂದ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ವಿಶ್ರಾಂತಿ ಇಲ್ಲದೆ ಶ್ರಮಿಸಿ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಪರಿಹಾರ ಕೇಂದ್ರಗಳು ಮುಂದುವರಿದಿದ್ದು, ಅಲ್ಲಿಗೆ ಅಗತ್ಯವಿರುವ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಬೇಕು. ಗ್ರಾಮಗಳಿಗೆ ಕುಡಿಯುವ ನೀರು, ಪಶುಗಳಿಗೆ ಮೇವು ಮತ್ತು ಆರೋಗ್ಯ ತಪಾಸಣೆಗೆ ಸಂಚಾರಿ ತಂಡಗಳು ತಲುಪುವಂತೆ ತಹಶೀಲ್ದಾರ್‌ರು ಉಸ್ತುವಾರಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ ಮೊದಲಾದವರಿದ್ದರು.