ಆಲಮಟ್ಟಿ: ಇಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಪ್ರವಾಹ ನಿರ್ವಹಣೆ ಸಭೆ ಜರುಗಿತು.
ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಕುಮಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಹಾಗೂ ಮಹಾರಾಷ್ಟ್ರ ರಾಜ್ಯದ ಕೃಷ್ಣೆಯ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಮತ್ತು 2019-20ರಲ್ಲಿ ಉಂಟಾದ ಪ್ರವಾಹದ ತೀವ್ರತೆಯನ್ನು ಚರ್ಚಿಸಲಾಯಿತು.
ಈ ವರ್ಷ ಬೃಹತ್ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಬಂದಿರುವುದಿಲ್ಲ. ಈಗ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಿಂದ ಯಾವುದೇ ತೊಂದರೆಯಿಲ್ಲ. 2 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದರೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಅಧಿಕಾರಿಗಳು ಪ್ರವಾಹದ ವೇಳೆ ಕೇಂದ್ರ ಸ್ಥಾನ ಯಾವುದೇ ಕಾರಣಕ್ಕೂ ಬಿಡಬಾರದು. ಮಹಾರಾಷ್ಟ್ರ ದ ನೀರಾವರಿ ಅಧಿಕಾರಿಗಳೊಂದಿಗೆ ಮತ್ತು ರಾಜ್ಯದ ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ಜನ-ಜಾನುವಾರುಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎಂ.ಡಿ ಬಿ.ಶಿವಕುಮಾರ ಸೂಚಿಸಿದರು.
ಸಭೆಯಲ್ಲಿ ಆಲಮಟ್ಟಿ ವಲಯ ಮುಖ್ಯ ಅಭಿಯಂತರ ಎಚ್.ಸುರೇಶ, ನಾರಾಯಣಪುರ ವಲಯ ಮುಖ್ಯ ಅಭಿಯಂತರ ಅಶೋಕ ವಾಸನದ, ಬಿಟಿಡಿಎ ಮುಖ್ಯ ಅಭಿಯಂತರ ಎಂ.ಸ್ವಾಮಿ, ರಾಂಪುರ ವಲಯ ಮುಖ್ಯ ಅಭಿಯಂತರ ಎಸ್ .ಡಿ.ನಾಯ್ಕರ, ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಡಿ.ಬಸವರಾಜ, ಅಧೀಕ್ಷಕ ಅಭಿಯಂತರ ಜೆ.ಜಿ.ರಾಠೊಡ ಮೊದಲಾದವರಿದ್ದರು.