ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಪೆ ಗ್ರಾಮದ ದೋಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು ಸಹಿತ ಸೇತುವೆ ಕಾಮಗಾರಿಯನ್ನು ಮಳೆಗಾಲಕ್ಕೆ ಮೊದಲೇ ಪೂರ್ಣಗೊಳಿಸಲು ಸಣ್ಣ ನೀರಾವರಿ ಎಂಜಿನಿಯರ್‌ಗಳಿಗೆ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಸೂಚಿಸಿದ್ದಾರೆ.
ಗುರುವಾರ ಇಲ್ಲಿ ಫಲ್ಗುಣಿ ನದಿಯಲ್ಲಿ ಸುಮಾರು 42 ಕೋ.ರೂ. ವೆಚ್ಚದ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯನ್ನು ಅವರು ವೀಕ್ಷಿಸಿದರು. ಸಂಗಬೆಟ್ಟು ಗ್ರಾ.ಪಂ.ನ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಅಣೆಕಟ್ಟು ಕಾಮಗಾರಿ ವಿಳಂಬ, ಕೂಲಿ ಕಾರ್ಮಿಕರ ಸ್ಥಿತಿಯನ್ನು ಪರಿಶೀಲಿಸಿ ಮಾತನಾಡಿದರು.
ಕೊರೊನಾ ಹಿನ್ನೆಲೆಯಲ್ಲಿ ಕಾಮ ಗಾರಿ ವಿಳಂಬವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಈ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿಯೂ ತಿಳಿಸಿದರು.
ಹಿಂದೆ ಮಂಜೂರುಗೊಂಡ 16 ಕೋ.ರೂ. ಅನುದಾನವನ್ನು ಊರವರ ಬೇಡಿಕೆ ಹಿನ್ನೆಲೆಯಲ್ಲಿ 32 ಕೋ.ರೂ.ಗೆ ಹೆಚ್ಚಿಸಿ ಸೇತುವೆ ವಿಸ್ತರಣೆ, ಘನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಂಟ್ವಾಳ, ಮಂಗಳೂರು ತಾಲೂಕು ಸಂಪರ್ಕದ ಅಣೆಕಟ್ಟು ಇದಾಗಿದ್ದು, ಎರಡೂ ಬದಿಯ ರೈತರ ಬೇಡಿಕೆಯಂತೆ 20 ಕಿ.ಮೀ. ಉದ್ದಕ್ಕೆ ಕೃಷಿ ಭೂಮಿಗೆ ನೀರು ಹರಿಯಲು ಮತ್ತೆ 12 ಕೋಟಿ ರೂ. ಅನುದಾನ ಮಂಜೂರುಗೊಳಿಸಲಾಗಿದೆ. ಈ ಕಾಮಗಾರಿ ಪೂರ್ಣ ವಾದರೆ ಈ ಭಾಗದಲ್ಲಿ ನೀರಿನ ಸಮಸ್ಯೆ ಸುಧಾರಿಸಲಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು ಕಡೆಯಿಂದ, ಬಂಟ್ವಾಳದ ವಾಮದಪದವು, ಸಿದ್ದಕಟ್ಟೆ ಮುಂತಾದ ಪ್ರದೇಶದ ಜನರಿಗೆ ಮಂಗಳೂರು ಸಂಪರ್ಕ ಸುಗಮವಾಗಲಿದ್ದು, ಮಂಗಳೂರು ತಾಲೂಕಿನ ಕುಪ್ಪೆಪದವು, ಎಡಪದವು ಸಹಿತ ಬಹುತೇಕ ಜನರಿಗೆ ಈ ರಸ್ತೆಯ ಮೂಲಕ ಬಂಟ್ವಾಳ, ಧರ್ಮಸ್ಥಳ, ಉಜಿರೆ ಹತ್ತಿರವಾಗಲಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೂ ಹತ್ತಿರವಾಗಲಿದೆ ಎಂದರು.
ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣ ಕುಮಾರ್, ಸಹಾಯಕ ಎಂಜಿನಿಯರ್ ಪ್ರಸನ್ನ, ಗುತ್ತಿಗೆದಾರರ ಎಂಜಿನಿಯರ್ ಪ್ರಿನ್ಸ್, ಸೈಟ್ ಮ್ಯಾನೇಜರ್ ಮಂಜುನಾಥ್, ಪ್ರಮುಖರಾದ ಗಣೀಶ್ ರೈ ಮಾಣಿ, ಗ್ರಾಮದ ಪ್ರಮುಖರಾದ ತೇಜಸ್ ಮರ್ದೊಟ್ಟು, ನವೀನ ಪೂಜಾರಿ ಹೊಸಹೊಕ್ಲು, ಶಾಸಕರ ಆಪ್ತ ಸಹಾಯಕರಾದ ದಿನೇಶ್, ಪವನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.