Advertisement

ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ನೋಟಿಸ್‌

10:53 PM Oct 04, 2019 | Lakshmi GovindaRaju |

ಬೆಂಗಳೂರು: ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದು, 10 ದಿನದೊಳಗೆ ಉತ್ತರಿಸುವಂತೆ ಸೂಚಿಸಿದೆ. ಇದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವು ರಾಜ್ಯದ ನೆರೆ ಸಂತ್ರಸ್ತರನ್ನು ಕಡೆಗಣಿಸಿರು ವುದು ಸರಿಯಲ್ಲ. ಯಡಿಯೂರಪ್ಪ ಅವರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬುದಾಗಿ ಇತ್ತೀಚೆಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಕ್ಷದಲ್ಲಿ ಪರ- ವಿರೋಧದ ಚರ್ಚೆ ಶುರುವಾಗಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಶಿಸ್ತುಪಾಲನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಅವರು ಶುಕ್ರವಾರ ನೋಟಿಸ್‌ ಜಾರಿ ಮಾಡಿದ್ದಾರೆ.

ಪಕ್ಷದ ಶಾಸಕರಾದ ತಾವು ಅ.1, 3ರಂದು ದೃಶ್ಯ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಪಕ್ಷಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದೀರಿ. ನಿಮ್ಮದೇ ಪಕ್ಷದ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಸಂಬಂಧಪಟ್ಟಂತೆ ಬಾಕಿ ಹಾಗೂ ಸಮಯಕ್ಕೆ ಸರಿಯಾಗಿ ಪರಿಹಾರ ವಿತರಿಸುವ ಕಾರ್ಯ ಕೈಗೊಂಡಿದ್ದರೂ ಅದನ್ನು ಅಲ್ಲಗಳೆದು ಅವಮಾನಿಸಿದ್ದೀರಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪಕ್ಷ ಹಾಗೂ ಪಕ್ಷದ ನಾಯಕರಿಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಕರ್ನಾಟಕದ ಜನತೆ ಪಕ್ಷದ ನಾಯಕರಿಗೆ ಹೊಡೆದು ಪಾಠ ಕಲಿಸಬೇಕೆಂದು ಹೇಳುವ ಮೂಲಕ ದೈಹಿಕ ಹಲ್ಲೆ ನಡೆಸುವಂತೆ ಕರೆ ನೀಡಿದಂತಿದೆ. ಸುಳ್ಳು ಮಾಹಿತಿ ಹರಡುವ ಜತೆಗೆ ಪಕ್ಷದ ನಾಯಕತ್ವವನ್ನು ಅಧಿಕಾರ ಕೇಂದ್ರವೆಂದು ನಿಂದಿಸಿದ್ದೀರಿ. ಪಕ್ಷದ ನಾಯಕತ್ವ ವಹಿಸಿಕೊಂಡವರು ಕರ್ನಾಟಕದ ವಿಚಾರಗಳಿಗೆ ಹೆಚ್ಚಿನ ಗಮನ ನೀಡುತ್ತಿಲ್ಲ ಎನ್ನುವ ಮೂಲಕ ನಾಯಕತ್ವವನ್ನೇ ದೂರಿದ್ದೀರಿ ಎಂದು ಉಲ್ಲೇಖೀಸಲಾಗಿದೆ.

ಪಕ್ಷ ಹಾಗೂ ಪಕ್ಷದ ನಾಯಕತ್ವದ ವಿರುದ್ಧ ನೀವು ಆರೋಪ ಮಾಡಿರುವುದು ಪಕ್ಷದ ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ಕೇಳಿ ನೋಟಿಸ್‌ ನೀಡಲಾಗುತ್ತಿದ್ದು, 10 ದಿನದೊಳಗೆ ಸ್ಪಷ್ಟನೆ ನೀಡಬೇಕು. ಒಂದೊಮ್ಮೆ ಸ್ಪಷ್ಟನೆ ನೀಡದಿದ್ದರೆ ಈ ವಿಚಾರದಲ್ಲಿ ತಾವು ಹೇಳುವುದು ಏನು ಇಲ್ಲ ಎಂದು ಪರಿಭಾವಿಸಿ ನಿಯಮಾನುಸಾರ ಸಮಿತಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ.

Advertisement

ಸಿಎಂ ಸೇರಿದಂತೆ ಯಾರ ಪ್ರಚೋದನೆಯೂ ಇಲ್ಲ
ವಿಜಯಪುರ: ನಾನು ನೆರೆ ಸಂತ್ರಸ್ತರ ವಿಷಯದಲ್ಲಿ ಪಕ್ಷದ ಸರ್ಕಾರಗಳ ವಿರುದ್ಧ ಧ್ವನಿ ಎತ್ತುವಲ್ಲಿ ಸಿಎಂ ಸೇರಿದಂತೆ ಯಾರ ಪ್ರಚೋದನೆಯೂ ಇಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಸಿಎಂ ಯಡಿಯೂರಪ್ಪ ಅತ್ಯಂತ ಧೈರ್ಯಶಾಲಿ. ಬೆಳಗಾವಿ ಜಿಲ್ಲೆಯ ಪ್ರವಾಹ ಬಾ ಧಿತ ಪ್ರದೇಶಗಳಲ್ಲಿ ಸಂಚರಿಸಿ ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ.

ಜನರು ಪ್ರತಿಭಟನೆ, ಘೇರಾವ್‌ ಹಾಕಿದರೂ ಜನರಿಂದ ದೂರವಾಗದೇ ಸಮಸ್ಯೆ ಆಲಿಸಿದ್ದಾರೆ. ಬೇರೆ ಯಾರೋ ಆಗಿದ್ದರೆ ಇಂಥ ಧೈರ್ಯ ತೋರುತ್ತಿರಲಿಲ್ಲ ಎಂದರು. ರಾಜ್ಯದಲ್ಲಿ ಉಂಟಾಗಿರುವ ನೆರೆ ನಷ್ಟ ಪರಿಹಾರಕ್ಕೆ ತಕ್ಷಣ 5,000 ಕೋಟಿ ರೂ. ಮಧ್ಯಂತರ ಪರಿಹಾರ ಕೋರಿ ಪ್ರಧಾನಮಂತ್ರಿ ಕಚೇರಿಗೆ ಫ್ಯಾಕ್ಸ್‌, ಇ-ಮೇಲ್‌ ಮೂಲಕ ಪತ್ರ ಬರೆದಿರುವುದಾಗಿ ಯತ್ನಾಳ್‌ ಹೇಳಿದರು.

“ಪೂರ್ಣ ಪ್ರಮಾಣದ ಹಾನಿ ಕುರಿತು ನಂತರ ಸಮಗ್ರ ವರದಿ ತರಿಸಿಕೊಳ್ಳಿ. ಪ್ರಾಥಮಿಕ ಹಂತದಲ್ಲಿ ನೀಡಿರುವ ವರದಿಯನ್ನು ಆಧರಿಸಿ ತಕ್ಷಣವೇ ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದೇನೆ. ಜಿಲ್ಲೆಯ ಜವಾಬ್ದಾರಿಯುವ ಜನಪ್ರತಿನಿಧಿಯಾಗಿ ನಾನು ನನ್ನ ಕೆಲಸ ಮಾಡಿದ್ದು, ಮಾಧ್ಯಮಗಳು ಮಾಡಿರುವ ನೆರೆ ಹಾವಳಿ ಪರಿಣಾಮಕಾರಿ ವರದಿಗಳು ಸರ್ಕಾರದ ಗಮನಕ್ಕೆ ಬಂದಿವೆ. ಪ್ರಧಾನಿ ಮೋದಿ ಅವರು ರಾಜ್ಯದ ಜನರ ಭಾವನೆಗಳಿಗೆ ಸ್ಪಂದಿಸುವ ಹಾಗೂ ಜನರ ಭಾವನೆಗಳಿಗೆ ಅವಮಾನ ಮಾಡುವ ಕೆಲಸ ಮಾಡಲಾರರು ಎಂಬ ವಿಶ್ವಾಸವಿದೆ’ ಎಂದರು.

ಖಜಾನೆ ಖಾಲಿ ಆಗಿಲ್ಲ: ಅವೈಜ್ಞಾನಿಕ ಹಾಗೂ ಬೇಕಾಬಿಟ್ಟಿ ಸಾಲ ಮನ್ನಾ ಮಾಡಿ 54 ಸಾವಿರ ಕೋಟಿ ರೂ. ಕೊಟ್ಟು ರಾಜ್ಯದ ಖಜಾನೆ ಖಾಲಿ ಮಾಡಿ ಕುಮಾರಸ್ವಾಮಿ ಓಡಿ ಹೋಗಿದ್ದಾರೆ. ಎಲ್ಲೋ ಕುಳಿತ ಇನ್ನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ದಿವಾಳಿಯಾಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದಿರುವ ಒಂದೇ ತಿಂಗಳಲ್ಲಿ ರಾಜ್ಯದ ಖಜಾನೆ ಖಾಲಿ ಆಗಲು ಸಾಧ್ಯವೇ? ಕೇಂದ್ರದಿಂದ ಪರಿಹಾರ ಬಿಡುಗಡೆ ಆಗದ ಕಾರಣ ಶಾಸಕರ ಭಾವನೆಗಳಿಗೆ ಪ್ರತಿಕ್ರಿಯಿಸುವಾಗ ಸಿಎಂ ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ಸಹಜವಾಗಿ ಹೇಳಿದ್ದಾರೆ ಅಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next