ಬೆಂಗಳೂರು: ವಿಧಾನಸಭೆ ಸದಸ್ಯರನ್ನು ಶಾಸಕರೆಂದು ಸಂಬೋಧಿಸುವ ರೀತಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನು ಸಹ ಶಾಸಕರೆಂದು ಸಂಭೋದಿಸುವುದರ ಜತೆಗೆ ಸರಕಾರದ ಆಮಂತ್ರಣ ಪತ್ರಿಕೆಗಳಲ್ಲಿ ಇದೇ ರೀತಿ ಉಲ್ಲೇಖಿಸಿ ಶಿಷ್ಟಾಚಾರ ಪಾಲಿಸುವಂತೆ ನಿರ್ದೇಶನ ನೀಡಲು ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.
ಮೇಲ್ಮನೆ ಸದಸ್ಯರ ಬಗ್ಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಅಧಿಕಾರಿ ವರ್ಗದವರು ತಾರತಮ್ಯದಿಂದ ಕಾಣುತ್ತಿರುವುದು ಗಮ ನಕ್ಕೆ ಬಂದಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್ತಿನ ಕಲಾಪದಲ್ಲಿ ಹಲವು ಸದಸ್ಯರು ಈ ಬಗ್ಗೆ ಪ್ರಸ್ತಾವಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾಧಿಕಾರಿ, ಜಿಪಂ ಸಿಇಒಗಳಿಗೆ ಲಿಖಿತ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಹೊರಟ್ಟಿ ಸೂಚಿಸಿದ್ದಾರೆ.