ಬೆಂಗಳೂರು: ನಗರದ ಮೆಜೆಸ್ಟಿಕ್ ಸಮೀಪದ ಒಕಳೀಪುರಂ ಜಂಕ್ಷನ್‌ನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಎಂಟು ಪಥದ ಕಾರಿಡಾರ್ ಯೋಜನೆ ಕಾಮಗಾರಿಗೆ ಅಡ್ಡಿಯಾಗಿರುವ ಶನಿಮಹಾತ್ಮ ದೇವಾಲಯ ತೆರವುಗೊಳಿಸುವ ಬಗ್ಗೆ ಉತ್ತರ ನೀಡುವಂತೆ ಬಿಬಿಎಂಪಿ ಮತ್ತು ರೈಲ್ವೆ ಇಲಾಖೆಗೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.
ಈ ಕುರಿತಂತೆ ಮತ್ತಿಕೆರೆಯ ಕೆ.ಎಸ್.ಸುಬ್ರಮಣ್ಯನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾ. ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್.ಬಸವರಾಜ್, ಮೆಜಸ್ಟಿಕ್‌ಗೆ ಹೊಂದಿಕೊಂಡಿರುವ ಒಕಳೀಪುರಂ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿರ್ವಹಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರೈಲ್ವೆ ಸಚಿವಾಲಯ ಹಾಗೂ ಪಾಲಿಕೆ ಸುಮಾರು 200 ಕೋಟಿ ವೆಚ್ಚದಲ್ಲಿ ಜಂಟಿಯಾಗಿ ಕಾರಿಡಾರ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿವೆ.
ಆದರೆ ಆ ಕಾಮಗಾರಿಗೆ ಶನಿ ದೇವಾಲಯ ಅಡ್ಡಿಯಾಗಿದ್ದು, ಅದನ್ನು ತೆರವುಗೊಳಿಸಲು ಕೆಲವು ಪ್ರಭಾವಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅಸಲಿಗೆ ಅಲ್ಲಿ ಮೊದಲಿಂದ ದೇವಾಲಯ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ಕೆಲವು ವ್ಯಕ್ತಿಗಳು ಸಣ್ಣ ಫೋಟೋ ತಂದಿಟ್ಟು, ಕ್ರಮೇಣ ಅನಧೀಕೃತವಾಗಿ ದೇವಾಲಯ ನಿರ್ಮಿಸಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಬಿಬಿಎಂಪಿ ಹಾಗೂ ರೈಲ್ವೆ ಇಲಾಖೆಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಎಂದು ಅರ್ಜಿದಾರರು ದೂರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ಅನಧೀಕೃತ ದೇಗುಲ ತೆರವು ಮಾಡಲು ಯಾಕಿಷ್ಟು ವಿಳಂಬ ಮಾಡುತ್ತಿದ್ದೀರಿ, ಈ ಬಗ್ಗೆ ಸಮಂಜಸ ಉತ್ತರ ಕೊಡಿ ಎಂದು ಹೇಳಿದರು. ಆಗ ಉತ್ತರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಬಿಬಿಎಂಪಿ ಪರ ಹಾಗೂ ರೈಲ್ವೆ ಇಲಾಖೆ ಪರ ವಕೀಲರು ಕೋರಿದರು. ಸಮರ್ಪಕ ಉತ್ತರ ನೀಡುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು 2019ರ ಜ.9ಕ್ಕೆ ಮುಂದೂಡಿತು.