ಮಂಗಳೂರು: ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿರು ವುದನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಇನ್ನು ಮುಂದೆ ಆಯಾ ಶಾಲೆಗಳ ಆಡಳಿತ ಮಂಡಳಿಗಳೇ ಅಂತಹ ಕಡೆ ಮಕ್ಕಳಿಗೆ ಸೂಕ್ತ ವಾಹನದ ಸೌಲಭ್ಯ ಒದಗಿಸಬೇಕೆಂದು ಸೂಚಿಸಿದೆ. ಸರಕು ಸಾಗಣೆ ವಾಹನಗಳಲ್ಲಿ ಯಾವುದೇ ಸುರಕ್ಷೆಯಿಲ್ಲದೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದರಿಂದ ಅಪಘಾತ ಪ್ರಕರಣ ಗಳು ಹೆಚ್ಚುತ್ತಿವೆ.
ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಒಂದು ಊರಿನಿಂದ ಇನ್ನೊಂದು ಊರಿಗೆ ದಿನನಿತ್ಯ ಸಂಚರಿಸುವ, ಕ್ರೀಡಾಕೂಟ, ಸಭೆ ಸಮಾರಂಭಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ಸರಕು ಸಾಗಣೆ ವಾಹನಗಳಲ್ಲಿ ಕರೆದೊಯ್ಯುವುದೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಸ್ಯೆಯಾಗಿದೆ. ಮುಂದೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲ ಶಾಲಾ ಮುಖ್ಯಸ್ಥರು ಗಮನಹರಿಸಿ ಶಾಲಾ ಆಡಳಿತ ಮಂಡಳಿ ವತಿಯಿಂದಲೇ ದೂರದೂರಿನಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡ ಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೆಎಸ್ಸಾರ್ಟಿಸಿಯಿಂದ ಬಸ್ ಸೌಲಭ್ಯ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಶಾಲಾ ಮಕ್ಕಳ ಸಾಗಣೆ ಗಾಗಿಯೇ ವಿಶೇಷ ರಿಯಾಯಿತಿ ದರದಲ್ಲಿ ಶಾಲೆಗಳ ಒಪ್ಪಂದದ ಮೇರೆಗೆ ಬಸ್ ವ್ಯವಸ್ಥೆ ನೀಡುತ್ತಿದೆ. ಆರ್ಥಿಕವಾಗಿ ಸ್ವಂತ ವಾಹನ ಹೊಂದಲು ಸಾಧ್ಯವಿಲ್ಲದ ಶಾಲೆಯವರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಶಾಲಾ ಮಕ್ಕಳಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವ ಸೌಲಭ್ಯವು ಈಗಾಗಲೇ ಚಾಲ್ತಿ ಯಲ್ಲಿದ್ದು, ಆ ಸೌಲಭ್ಯವನ್ನೂ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಸರಕಾರಿ ಶಾಲೆಯವರೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಆಡಳಿತ ಮಂಡಳಿ ಮೇಲೆ ಕ್ರಮ: ವಾಹನ ವ್ಯವಸ್ಥೆಯಿಲ್ಲದ ಶಾಲೆಗಳಿಗೆ, ಪ್ಯಾಸೆಂಜರ್ ಗಾಡಿಗಳಲ್ಲಿ ನಿಗದಿತ ಮಿತಿಯೊಳಗೆ ಶಾಲಾ ಮಕ್ಕಳನ್ನು ಕರೆ ತರಲು ಅವಕಾಶವಿದೆ. ಆದರೆ, ಸರಕು ಸಾಗಾಟ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆ ತರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಯು ಆಯಾ ಶಾಲಾ ಆಡಳಿತ ಮಂಡಳಿಗಳಿಗೇ ವಹಿಸಿದೆ. ಅಂತಹ ಕಡೆಗಳಲ್ಲಿ ಕಡ್ಡಾಯವಾಗಿ ವಾಹನ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಬೇಕು. ಈ ಬಗ್ಗೆ ಆಡಳಿತ ಮಂಡಳಿಗಳು ಉದಾಸೀನ ವಹಿಸಿದಲ್ಲಿ, ಮುಂದೆ ಅಂತಹ ವಾಹನಗಳಿಂದಾಗಿ ಅವಘಡಗಳು ಸಂಭವಿಸಿದ್ದಲ್ಲಿ ಮಕ್ಕಳು ಓದುವ ಶಾಲೆಗಳ ಆಡಳಿತ ಮಂಡಳಿಯನ್ನೇ ಹೊಣೆಯಾಗಿಸಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಲಾಗಿದೆ.
ಸರಕಾರಿ ಶಾಲೆಯ ಕಥೆ?: ಖಾಸಗಿ ಶಾಲೆಗಳಲ್ಲಿ ವಾಹನ ಸೌಲಭ್ಯ ಒದಗಿಸಲು ಬೇಕಾದಷ್ಟು ಆರ್ಥಿಕ ಶಕ್ತಿ ಇರುತ್ತದೆ. ಆದರೆ, ಸರಕಾರದಿಂದಲೇ ನಡೆಸಲ್ಪ ಡುವ ಸರಕಾರಿ ಶಾಲೆಗಳ ಮುಖ್ಯಸ್ಥರು ವಾಹನ ಖರೀದಿಸುವುದು ಹೇಗೆಂಬ ಗೊಂದಲ ಎದುರಾಗಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ಸರಕಾರಿ ಶಾಲೆಗಳಿಗೆ ದೂರದೂರುಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಅಲ್ಲದೆ, ಬಸ್‌ಗಳಲ್ಲಿ ಬರಬಹುದು. ಹಾಗಾಗಿ ಅಲ್ಲಿ ಸಮಸ್ಯೆ ಉದ್ಭವಿಸುವುದಿಲ್ಲ ಎನ್ನುತ್ತಾರೆ. ಆದರೆ, ಈ ಗೊಂದಲದ ಬಗ್ಗೆ ಇಲಾಖೆ ಆಯುಕ್ತರು ಸರಿಯಾದ ಮಾಹಿತಿ ಒದಗಿಸಿಲ್ಲ.
ಸರಕು ಸಾಗಾಟ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿ ರುವುದು ಮತ್ತು ಅದರಿಂದ ಅವಘಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯಿಂದಲೇ ಬಸ್ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರ್ಥಿಕ ಶಕ್ತಿ ಇಲ್ಲದವರು ಕೆಎಸ್ಸಾರ್ಟಿಸಿ ಯಿಂದ ರಿಯಾಯಿತಿ ದರದಲ್ಲಿ ನೀಡುವ ಬಸ್ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬಹುದು.
ಡಾ| ಕೆ. ಜಿ. ಜಗದೀಶ, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು
* ಧನ್ಯಾ ಬಾಳೆಕಜೆ