Advertisement

ಶೌಚಾಲಯವಿಲ್ಲದ ಶಾಲೆಗಳ ಸಮೀಕ್ಷೆಗೆ ಸೂಚನೆ

04:41 PM May 07, 2022 | Team Udayavani |

ಚಿಕ್ಕಮಗಳೂರು: ಸರ್ಕಾರಿ ಯೋಜನೆಯಡಿ ಮನೆ ಕಟ್ಟಲು ಖಾಸಗಿ ಬ್ಯಾಂಕ್‌ಗಳು ಸಾಲ ನೀಡದಿದ್ದಲ್ಲಿ ಅಂತಹ ಬ್ಯಾಂಕ್‌ಗಳಲ್ಲಿರುವ ಸರ್ಕಾರದ ಹಣವನ್ನು ವಾಪಸ್‌ ಪಡೆದುಕೊಳ್ಳಿ ಹಾಗೂ ಈ ಬ್ಯಾಂಕ್‌ಗಳ ವಿರುದ್ಧ ಕೇಂದ್ರ ವಿತ್ತ ಸಚಿವರಿಗೆ ದೂರು ಸಲ್ಲಿಸಿ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ತಿಳಿಸಿದರು.

Advertisement

ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರು ಮನೆ ಕಟ್ಟಲು ಸಾಲ ನೀಡದ ಬ್ಯಾಂಕ್‌ಗಳಿಗೆ ದೇಶದಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಪೌರ ಕಾರ್ಮಿಕರ ವಸತಿ ಸಮುಚ್ಚಯವನ್ನು ನಿರ್ಮಿಸಲಾಗುತ್ತಿದೆ. ಮನೆ ನಿರ್ಮಾಣಕ್ಕೆ ಪೌರ ಕಾರ್ಮಿಕರು ವೈಯಕ್ತಿಕವಾಗಿ ಸ್ವಲ್ಪಮಟ್ಟಿನ ಹಣ ಭರಿಸಬೇಕಿದ್ದು ಬ್ಯಾಂಕ್‌ಗಳ ಮೂಲಕ ಸಾಲ ಪಡೆದುಕೊಳ್ಳಬೇಕಿದೆ. ಅವರಿಗೆ ಸಾಲ ನೀಡುವಂತೆ ಬ್ಯಾಂಕ್‌ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಆದರೆ, ಕೆಲವು ಖಾಸಗಿ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ಸಭೆಯ ಗಮನಕ್ಕೆ ತಂದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಈ ಸಂಬಂಧ ಮಾತನಾಡಿ, ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಲಾಗಿದೆ. 5 ರಿಂದ 6 ಬ್ಯಾಂಕ್‌ಗಳು ಸಾಲ ನೀಡಲು ನಿರಾಸಕ್ತಿ ತೋರುತ್ತಿವೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲಾಧಿಕಾರಿಗಳು ಬ್ಯಾಂಕ್‌ ಮುಖ್ಯಸ್ಥರ ಸಭೆ ನಡೆಸಬೇಕು. ನಾನು ಸಹ ಬ್ಯಾಂಕ್‌ ಮುಖ್ಯಸ್ಥರೊಂದಿಗೆ ಮಾತನಾಡುತ್ತೇನೆ. ಮನೆ ಕಟ್ಟಲು ಸಾಲ ನೀಡಲು ಮುಂದಾಗದಿದ್ದರೆ ಕೇಂದ್ರ ಹಣಕಾಸು ಸಚಿವರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

Advertisement

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ‘ಅಮೃತ್‌ ಸರೋವರ’ ನೂತನ ಯೋಜನೆ ಜಾರಿಗೊಳಿಸುತ್ತಿದೆ. ಈ ಯೋಜನೆಯಡಿ ಜಿಲ್ಲೆಯ 75 ಕೆರೆಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ. ಈ ಯೋಜನೆಯ ಯಶಸ್ಸಿಗೆ ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಜಿ. ಪ್ರಭು ಮಾತನಾಡಿ, ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ. ಜಲ ಸಂರಕ್ಷಣೆ ಕಾಮಗಾರಿಗೆ ಒತ್ತು ನೀಡಿ 9,899 ಕಾಮಗಾರಿಗಳನ್ನು ನಡೆಸಲಾಗಿದೆ. ಗ್ರಾಮೀಣ ಪ್ರದೇಶ ಗಳಲ್ಲಿ ರಾಜೀವ್‌ ಗಾಂಧಿ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಸಂಜೀವಿನಿ ಶೆಡ್‌ ನಿರ್ಮಾಣ ಮಾಡಲಾಗಿದೆ. ತೋಟಗಾರಿಕೆ, ರೇಷ್ಮೆ ಅಭಿವೃದ್ಧಿಗೆ ರಾಜ್ಯಮಟ್ಟದ ಪ್ರಶಸ್ತಿಯೂ ಲಭಿಸಿದೆ ಎಂದು ತಿಳಿಸಿದರು.

ಕೃಷಿ ಮೂಲ ಸೌಕರ್ಯ ನಿಧಿ ಬಳಸಿಕೊಂಡು ಚಿಕ್ಕ ಶೀಥಲೀಕರಣ ಘಟಕ ಸ್ಥಾಪಿಸುವುದರಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಇದಕ್ಕೆ ಸಹಾಯಧನ ದೊರೆಯುವುದರಿಂದ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದಾರದಹಳ್ಳಿ ಆಯ್ಕೆ ಮಾಡಲಾಗಿದ್ದು, ಸಂಬಂಧಪಟ್ಟ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಇಲಾಖೆ ಇಂಜಿನಿಯರ್‌ ತಿಳಿಸಿದರು.

ಗಾಂಘರ್‌ ಗ್ರಾಮದ ಅಭಿವೃದ್ಧಿಗೆ 10 ಲಕ್ಷ ರೂ. ನೀಡಿದ್ದು ಯೋಜನೆ ತಯಾರಿಸುವಂತೆ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆ ನಿರ್ದೇಶನದಂತೆ ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಪಂ ಆಯ್ಕೆ ಮಾಡಿಕೊಂಡಿದ್ದು, ಹಳ್ಳಿಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಸಾಲಿನಲ್ಲಿ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯ ಪಂಚಾಯತ್‌ ಆಯ್ಕೆ ಮಾಡಿಕೊಂಡಿದ್ದು, ಹಳ್ಳಿಗಳ ಸರ್ವೇ ಕಾರ್ಯ ಮುಕ್ತಾಯಗೊಂಡು ಗ್ರಾಮಾಭಿವೃದ್ಧಿ ಯೋಜನೆ ತಯಾರಿಕೆ ಪ್ರಗತಿಯಲ್ಲಿದೆ ಎಂದು ಇಂಜಿನಿಯರ್‌ ಸಭೆಗೆ ಮಾಹಿತಿ ನೀಡಿದರು.

ಶೋಭಾ ಕರಂದ್ಲಾಜೆ ಮಾತನಾಡಿ, ಸ್ವಚ್ಛ ಭಾರತ್‌ ಯೋಜನೆಯಡಿ ಶಾಲೆಗಳಲ್ಲಿ ಶೌಚಾಲಯವಿಲ್ಲದ ಹಾಗೂ ಉಪಯೋಗಕ್ಕೆ ಬಾರದ ಶೌಚಾಲಯಗಳ ಸಮೀಕ್ಷೆ ನಡೆಸಬೇಕು ಮತ್ತು ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆ ಮತ್ತು ಬಾಲಕಿಯರ ಹಾಸ್ಟೆಲ್‌ ಕಾಂಪೌಂಡ್‌ ನಿರ್ಮಾಣಕ್ಕೆ ಆದ್ಯತೆ ನಿಡಬೇಕು. ಆಟದ ಮೈದಾನಗಳಿಲ್ಲದ ಶಾಲೆಗಳ ಸರ್ವೇ ಕಾರ್ಯ ನಡೆಸಬೇಕೆಂದು ತಿಳಿಸಿದರು.

ಸಾಮಾಜಿಕ ಅರಣ್ಯ ನಿರ್ಮಾಣ ಕಾರ್ಯ ಹಳೇಗುಂಡಿಗೆ ಹೊಸಗಿಡ ನೆಡುವ ಕೆಲಸ ಆಗಬಾರದು. ನೀಲಗಿರಿ ಮತ್ತು ಅಕೇಶಿಯಾ ಗಿಡಗಳನ್ನು ನೆಡುವುದನ್ನು ಕೈಬಿಟ್ಟು ಹಣ್ಣಿನ ಗಿಡಗಳನ್ನು ನೆಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಮಹಿಳಾ ಒಕ್ಕೂಟಗಳನ್ನು ರಚಿಸಿದ್ದು, ಈ ಒಕ್ಕೂಟಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಮಾರಾಟ ಮಳಿಗೆ ತೆರೆಯಲು ಮುಳ್ಳಯ್ಯನಗಿರಿಯಲ್ಲಿ 5 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಮಳಿಗೆ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ ತಿಳಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ಮಾತನಾಡಿ, ನಗರದಲ್ಲಿ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯುತ್ತಿದೆ. ಆದರೆ ವೈಜ್ಞಾನಿಕವಾಗಿ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಚ್ಛ ಭಾರತ್‌ ಇಲಾಖೆ ಇಂಜಿನಿಯರ್‌ ಈ ತಿಂಗಳೊಳಗೆ ಕಸ ವಿಲೇವಾರಿ ಘಟಕದಲ್ಲಿ ಯಂತ್ರ ಅಳವಡಿಕೆ ಮಾಡಿ ವೈಜ್ಞಾನಿಕ ಕಸ ವಿಲೇವಾರಿ ಮಾಡಲಾಗುವುದು ಎಂದರು.

ಅಮೃತ್‌ ಕುಡಿಯುವ ನೀರು ಯೋಜನೆ ಶೀಘ್ರವೇ ಪೂರ್ಣಗೊಳಿಸುವಂತೆ ಸೂಚಿಸಿದ ಶೋಭಾ ಕರಂದ್ಲಾಜೆ, ಯುಜಿಡಿ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ಪಡೆದು 5 ಜನ ಕಾರ್ಮಿಕರಿಂದ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗದ ಮಾತು. ಮುಖ್ಯ ಇಂಜಿನಿಯರ್‌ಗೆ ನೋಟಿಸ್‌ ನೀಡಿ ಕೆಲಸ ಪೂರ್ಣಗೊಳಿಸುವ ಜವಾಬ್ದಾರಿ ಅವರಿಗೆ ನೀಡುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next