ರಾಮನಗರ: ಕೋವಿಡ್ 19 ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಗೆ ಸಂಬಂಧಿಸಿದಂತೆ ಮೂರು ಸ್ಥಳಗಳಲ್ಲಿ ಗೂಡು ಹರಾಜಿಗೆ ವ್ಯವಸ್ಥೆ ಕೈಗೊಳ್ಳುವಂತೆ ರೇಷ್ಮೆ, ತೋಟಗಾರಿಕೆ ಹಾಗೂ ಪೌರಾಡಳಿತ ಸಚಿವ ನಾರಾಯಣ ಗೌಡ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಬುಧವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡಿದ್ದ ಅವರು ಅಧಿಕಾರಿಗಳೊಂದಿಗೆ ಮಾತನಾಡಿದರು. ರೇಷ್ಮೆ ಬೆಳೆಗಾರರು ನಷ್ಟಕ್ಕೆ ಒಳಗಾಗಬಾರದು ಎಂಬ ಉದ್ದೇಶಕ್ಕೆ ಗೂಡು ಮರಾಟಕ್ಕೆ ಅವಕಾಶ ಮಾಡಲಾಗಿದೆ. ಆದರೆ ಜನಸಂದಣಿಗೆ ಅವಕಾಶವಾಗಬಾರದು. ಹೀಗಾಗಿ ಹಾಲಿ ಮಾರುಕಟ್ಟೆಯ ಜೊತೆಗೆ ಇನ್ನೆರೆಡು ಕಡೆ ಹರಾಜಿಗೆ ವ್ಯವಸ್ಥೆ ಮಾಡಿ ಎಂದು ಸೂಚನೆ ಕೊಟ್ಟರು.
ಮಾರುಕಟ್ಟೆ ಹೊರತು ಪಡಿಸಿ ಬೇರೆ ಕಡೆ ಹರಾಜಿಗೆ ವ್ಯವಸ್ಥೆಯಾದರೆ ಅಂತರ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳ ಮಾತಿಗೆ ಸಚಿವರು ಸೊಪ್ಪು ಹಾಕಲಿಲ್ಲ. ಸೋಂಕು ಹರಡದಂತೆ ಎಲ್ಲ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ಮಹೇಂದ್ರ, ಮಾರುಕಟ್ಟೆ ಉಪನಿರ್ದೇಶಕ ಮುನಿಬಸಯ್ಯ ಮತ್ತು ಅಧಿಕಾರಿಗಳು ಮಾತನಾಡಿ, ಚನ್ನಪಟ್ಟಣ, ಕನಕಪುರದಿಂದ ಬರುವ ರೇಷ್ಮೆಯನ್ನು ಆಯಾ ತಾಲೂಕುಗಳಲ್ಲೇ ಮಾರಾಟ ಮಾಡಲು ಮಾಡಿರುವ ವ್ಯವಸ್ಥೆ ಬಗ್ಗೆ ಮಾಹಿತಿ ಕೊಟ್ಟರು.
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಾಯಣ್ಣ ಗೌಡ, ನಗರಸಭೆ ಆಯುಕ್ತ ಬಿ.ಶುಭಾ ಹಾಜರಿದ್ದರು.