ಗದಗ: 2018-19ನೇ ಶೈಕ್ಷಣಿಕ ಸಾಲಿನ ಜಿಲ್ಲೆಯ ಎಸ್‌ಎಸ್‌ಎಲ್ಸಿ ಪರೀಕ್ಷಾ ಫಲಿತಾಂಶ ಪಾತಾಳಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅತೀ ಕಡಿಮೆ ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರನ್ನು ಎಚ್ಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ಆದರೆ, ಉಪನಿರ್ದೇಶಕರ ನೋಟಿಸ್‌ಗೆ ಯಾರೊಬ್ಬರೂ ಉತ್ತರಿಸದೇ ಅಸಡ್ಡೆ ತೋರಿದ್ದಾರೆ!
ಹೌದು. ಶಿಕ್ಷಣ ಇಲಾಖೆಯಲ್ಲಿ ಆಡಳಿತವನ್ನು ಬಿಗಿಗೊಳಿಸಬೇಕು. ಎಸ್‌ಎಸ್‌ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಕಲ್ಪ ತೊಟ್ಟಿದೆ. ಅದಕ್ಕಾಗಿ 2018-19ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ದಿನವೇ ಮುಂದಿನ ಶೈಕ್ಷಣಿಕ ವರ್ಷದ ಫಲಿತಾಂಶ ಸುಧಾರಣೆಗೆ 25 ಅಂಶಗಳನ್ನು ಕ್ರಿಯಾ ಯೋಜನೆಯನ್ನು ಡಿಡಿಪಿಐ ಎನ್.ಎಚ್. ನಾಗೂರ ಪ್ರಕಟಿಸಿದ್ದರು.
ಈ ಅಂಶಗಳ ಅನುಷ್ಠಾನದ ಜೊತೆಗೆ ಅತೀ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಸ್ಥಿತಿ ಗತಿಯನ್ನು ಅರಿಯುವ ಉದ್ದೇಶದಿಂದ ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಯ 9 ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಜು. 2ರಂದು ನೋಟಿಸ್ ನೀಡಿದ್ದಾರೆ. ನೋಟಿಸ್ ತಲುಪಿದ ಐದು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ. ಆದರೆ, ಗಡುವು ಮೀರಿ 15 ದಿನ ಕಳೆದರೂ ಯಾವುದೇ ಶಾಲೆಯ ಮುಖ್ಯಸ್ಥರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಉಪನಿರ್ದೇಶಕರ ಆದೇಶಕ್ಕೆ ಇಲಾಖೆಯಲ್ಲಿ ಬೆಲೆ ಇಲ್ಲವೇ ಎಂಬ ಮಾತು ಕೇಳಿಬರುತ್ತಿವೆ.
ನೋಟಿಸ್‌ನಲ್ಲಿ ಏನಿದೆ?: 2019ರ ಎಸ್‌ಎಸ್‌ಎಲ್ಸಿಯಲ್ಲಿ ಜಿಲ್ಲೆಯು ಶೇ. 74.84ರಷ್ಟು ಫಲಿತಾಂಶ ಬಂದಿದ್ದು, ರಾಜ್ಯ ಮಟ್ಟದಲ್ಲಿ 32ನೇ ಸ್ಥಾನಕ್ಕೆ ತಲುಪಿದೆ. ನಿಮ್ಮ ಶಾಲೆಯು ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದು, ಜಿಲ್ಲಾಮಟ್ಟದ ಫಲಿತಾಂಶಕ್ಕಿಂತ ಕಡಿಮೆಯಾಗಿದೆ. ನಿಮ್ಮ ಶಾಲೆಯ ಫಲಿತಾಂಶ ಕಳಪೆ ಸಾಧನೆಯಾಗಿದೆ. ಅದಕ್ಕೆ ಕಾರಣ ಏನು ಎಂಬುದರ ಬಗ್ಗೆ ಶಾಲಾ ಮುಖ್ಯಸ್ಥರು ಉತ್ತರಿಸಬೇಕಿದೆ. ಈ ನೋಟಿಸ್ ಮುಟ್ಟಿದ 5 ದಿನಗಳ ಒಳಗಾಗಿ ಲಿಖೀತವಾಗಿ ಉತ್ತರಿಸಬೇಕು. ಇಲ್ಲವೇ, ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಡಿಡಿಪಿಐ ಎನ್.ಎಚ್. ನಾಗೂರ ಅವರು ಜು. 2ರಂದು ನೊಟೀಸ್ ಜಾರಿಗೊಳಿಸಿದ್ದಾರೆ. ಉಪನಿರ್ದೇಶಕರ ನೊಟೀಸ್ ಪಡೆದಿರುವ 9 ಶಾಲೆಗಳ ಮುಖ್ಯಸ್ಥರು ಉತ್ತರಿಸುವ ಉಸಾಬರಿಗೆ ಹೋಗಿಲ್ಲ. ಅಲ್ಲದೇ, ಉತ್ತರಿಸಿದಷ್ಟೂ ಸಮಸ್ಯೆ ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ಶಾಲಾ ಮುಖ್ಯಸ್ಥರದ್ದಾಗಿರಬಹುದು. ಆದರೆ, ಶಾಲಾ ಮುಖ್ಯಸ್ಥರ ಈ ನಡೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದರೆ ಸರಕಾರಿ ಶಾಲಾ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಹಾಗೂ ಅನುದಾನಿತ ಸಂಸ್ಥೆಗಳು ಅನುದಾನ ಕಡಿತಗೊಳಿಸಬಹುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ 9 ಶಾಲೆಗಳ ಮುಖ್ಯಸ್ಥರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಈ ವರೆಗೆ ಯಾರೂ ಪ್ರತಿಕ್ರಿಯಿಸಿಲ್ಲ. ಈ ಕುರಿತಂತೆ ಮತ್ತೂಂದು ನೋಟಿಸ್ ನೀಡುತ್ತೇವೆ. ಅದರೊಂದಿಗೆ ಎಸ್‌ಎಸ್‌ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಕುರಿತು ಜು. 26ರಂದು ನಗರದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಮುಖ್ಯಸ್ಥರ ಸಮಾಲೋಚನಾ ಸಭೆ ಕರೆಯಲಾಗಿದೆ.
• ಎನ್.ಎಚ್. ನಾಗೂರ, ಡಿಡಿಪಿಐ
•ವೀರೇಂದ್ರ ನಾಗಲದಿನ್ನಿ