Advertisement

ಶೀಘ್ರ ರಸ್ತೆ ಬದಿ ಅಂಗಡಿಗಳ ತೆರವಿಗೆ ಸೂಚನೆ

12:32 PM Dec 13, 2019 | Suhan S |

ಹನೂರು: ರಸ್ತೆ ಬದಿ ಮತ್ತು ಅಂಗಡಿ ಮಳಿಗೆಗಳ ಮುಂಭಾಗ ಹೆಚ್ಚಿನ ಸ್ಥಳಾವಕಾಶ ಆಕ್ರಮಿಸಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೆ 2 ದಿನಗಳಲ್ಲಿ ಹೆಚ್ಚುವರಿ ಸ್ಥಳ ತೆರವು ಮಾಡುವಂತೆ ಪಪಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Advertisement

ಹನೂರು ಪಪಂ ವ್ಯಾಪ್ತಿಯ ಖಾಸಗಿ ಬಸ್‌ ನಿಲ್ದಾಣದ ಸಮೀಪ, ಮಲೆ ಮಹದೇಶ್ವರ ಬೆಟ್ಟ ರಸ್ತೆ ಮತ್ತು ಬಂಡಳ್ಳಿ ರಸ್ತೆಗಳಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿ ನಿರ್ಮಾಣ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಕ್ರಮವಹಿಸುವಂತೆ ಹಲವಾರು ದೂರು ಕೇಳಿ ಬಂದಿದ್ದವು

ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪಪಂ ಅಧಿಕಾರಿಗಳು ಪೊಲೀಸ್‌ ಬಂದೋಬಸ್ತ್ನಲ್ಲಿ ಪೆಟ್ಟಿಗೆ ಅಂಗಡಿ, ತಳ್ಳುವ ಗಾಡಿ, ಅಂಗಡಿ ಮುಂದೆ ಶೀಟು ಅಳವಡಿಸಿ ವ್ಯಾಪಾರ ಮಾಡುತ್ತಿರುವುದನ್ನು ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಬೀದಿಬದಿ ವ್ಯಾಪಾರಿಗಳು ಮತ್ತು ಮಳಿಗೆ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ವಿಚಲಿತರಾದ ಅಧಿಕಾರಿಗಳು, ಮುಂದಿನ 2 ದಿನಗಳಲ್ಲಿ ತೆರವು ಮಾಡುವಂತೆ ಸೂಚನೆ ನೀಡಿ ತೆರಳಿದರು.

ವ್ಯಾಪಾರಸ್ಥರ ಪರ ನಿಂತ ಸದಸ್ಯರು: ಇದೇ ವೇಳೆ ಪಪಂ ಕೆಲ ಸದಸ್ಯರು ವ್ಯಾಪಾರಸ್ಥರ ಪರ ನಿಂತು, ವ್ಯಾಪಾರಿಗಳಿಗೆ ತೊಂದರೆ ನೀಡುವ ಬದಲು ಸಾರ್ವಜನಿಕರಿಗೆ ಅವಶ್ಯಕವಾಗಿರುವ ಇ-ಸ್ವತ್ತು, ಉದ್ದಿಮೆ ಪರವಾನಗಿ, ಖಾತೆ ಬದಲಾವಣೆ, ಜನನ-ಮರಣ ಪ್ರಮಾಣ ಪತ್ರಗಳಂತಹ ಕೆಲಸಕ್ಕೆ ಒತ್ತು ನೀಡಿ ಎಂದು ಕಿಡಿಕಾರಿದರು.

ಎರಡು ವರ್ಷದಿಂದ ಮಳಿಗೆಗಳು ಹರಾಜಾಗದೇ ಹಾಗೇಯೇ ವ್ಯರ್ಥವಾಗಿ ಬಿದ್ದಿವೆ. ಮೊದಲು ಇದಕ್ಕೆ ಕ್ರಮವಹಿಸಿ ಎಂದರು. ಪಪಂ ಸದಸ್ಯರ ಈ ನಡೆಯಿಂದ ಬೇಸತ್ತ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬರಿಗೈಯಲ್ಲಿ ವಾಪಸ್ಸಾದರು. ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಾರ ನಡೆಸುವವರ ಸಂರಕ್ಷಣೆ ಮತ್ತು ಹಿತದೃಷ್ಟಿಯಿಂದ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮಿತಿ ರಚಿಸಲು ಸಹಕಾರ ಇಲಾಖೆ ಡಿ.4 ರಂದು ಆದೇಶ ಹೊರಡಿಸಿ ಡಿ.9 ರಿಂದ ಡಿ.11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಈ ಹಿನ್ನೆಲೆ ನಾಲ್ಕು ಜನ ನಾಮಪತ್ರ ಸಲ್ಲಿಸಿದ್ದರು. ಆದರೆ, ಪಪಂ ಅಧಿಕಾರಿಗಳ ಈ ದಿಢೀರ್‌ ನಿರ್ಧಾರದಿಂದಾಗಿ ಕಂಗಾಲಾದ ಬೀದಿಬದಿ ವ್ಯಾಪಾರಿಗಳು ನಮಗೆ ಪುನರ್ವಸತಿ ಕಲ್ಪಿಸಿ ಸೂಕ್ತ ಸ್ಥಳಾವಕಾಶ ಗುರುತಿಸಿ ಕೊಡುವವರೆಗೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನಾಮಪತ್ರ ಹಿಂಪಡೆಯಲು ತೀರ್ಮಾನ ಕೈಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next