Advertisement

ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮುಂಜಾಗ್ರತೆಗೆ ಸೂಚನೆ

05:11 PM Mar 28, 2020 | Suhan S |

ಹಾವೇರಿ: ಕೋವಿಡ್ 19 ವೈರಸ್‌ ಸಾಂಕ್ರಾಮಿಕ ರೋಗ ತಡೆಗಟ್ಟಲು ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಜಿಪಂ ಸಿಇಒ ರಮೇಶ ದೇಸಾಯಿ ಸೂಚಿಸಿದ್ದಾರೆ.

Advertisement

ಗ್ರಾಪಂ ವ್ಯಾಪ್ತಿಗಳಲ್ಲಿ ಕೋವಿಡ್‌ 19 ಹರಡದಂತೆ ಗ್ರಾಮೀಣ ಕಾರ್ಯಪಡೆ ರಚಿಸುವಂತೆ ಸೂಚಿಸಲಾಗಿದೆ. ತಾಪಂ ಮತ್ತು ಅವರ ಅಧೀನಬರುವ ಎಲ್ಲ ಅಧಿಕಾರಿ/ಸಿಬ್ಬಂದಿ ಮತ್ತು ಪಿಡಿಒಗಳು ತಮ್ಮ ಸ್ವಯಂ ರಕ್ಷಣೆಯೊಂದಿಗೆ ನಿರಂತರವಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಸಾರ್ವಜನಿಕರು ಯಾವುದೇ ಕಾರಣಕ್ಕೂ ಗುಂಪುಗುಂಪಾಗಿ ಸೇರದಂತೆ ಅಗತ್ಯ ಕ್ರಮಕೈಗೊಳ್ಳುವುದು, ದಿನನಿತ್ಯದ ಬಳಕೆ ವಸ್ತುಗಳಾದ ಕಿರಾಣಿ, ತರಕಾರಿ, ನ್ಯಾಯಬೆಲೆ ಅಂಗಡಿ, ಔಷಧ ಅಂಗಡಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಹತ್ತಿರ, ಗ್ರಾಪಂ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ಹತ್ತಿರ ಪೆಟ್ರೋಲ್‌ ಬಂಕ್‌ಗಳಲ್ಲಿ ಗುಂಪಾಗಿ ನಿಲ್ಲದೇ ಒಬ್ಬರಿಂದ ಇನ್ನೊಬ್ಬರಿಗೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ಬಣ್ಣದಿಂದ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ದಿನಬಳಕೆಯ ತರಕಾರಿ, ಹಣ್ಣು, ದಿನಸಿಗಳನ್ನು ಮಾರಲು ವ್ಯಾಪಾರಸ್ಥರು ದೂಡುವ ಗಾಡಿಯಲ್ಲಿ ತಂದು ಮಾರಾಟ ಮಾಡುವವರಿಗೆ ಸೂಕ್ತ ಅವಕಾಶ ಕಲ್ಪಿಸುವುದು ಹಾಗೂ ಈ ವೇಳೆಯಲ್ಲಿಯೂ ಜನರು ಗುಂಪಾಗಿ ನಿಲ್ಲದೇ ಇರುವ ರೀತಿ ನೋಡಿಕೊಳ್ಳುವುದು, ಗ್ರಾಮಗಳ ವ್ಯಾಪ್ತಿಯಲ್ಲಿ ತರಕಾರಿ, ಹಣ್ಣುಗಳ ಮಾರಾಟಗಾರರನ್ನು ಗುರುತಿಸಿ, ಸದರಿಯವರಿಗೆ ವ್ಯಾಪಾರ ಮಾಡಲು ತಳ್ಳುವ ಗಾಡಿ ಅಥವಾ ವಾಹನದ ಮೂಲಕ ಅನುಕೂಲವಾಗುವಂತೆ ತಾಲೂಕಾಡಳಿತದಿಂದ ಪರವಾನಗಿ ನೀಡುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಗ್ರಾಮದ ರಸ್ತೆ ಚರಂಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದೊಂದಿಗೆ ಕಸ ವಿಲೇವಾರಿ ಬಗ್ಗೆ ಕ್ರಮವಹಿಸುವುದು. ಕೋವಿಡ್ 19  ವೈರಸ್‌ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಾಗಲೂ ಸಹ ಗುಂಪುಗುಂಪಾಗಿ ಹೋಗದೆ ಒಬ್ಬರಿಂದ ಇನ್ನೊಬ್ಬರಿಗೆ ಕನಿಷ್ಠ ಅಂತರವನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕರಲ್ಲಿ ಯಾರಿಗಾದರೂ ಕೆಮ್ಮು, ನೆಗಡಿ, ತಲೆನೋವು, ಜ್ವರ ಮತ್ತು ಗಂಟಲಿನಲ್ಲಿ ಉರಿತ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಅಂತವರನ್ನು ಗುರುತಿಸಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕ್ರಮಕೈಗೊಳ್ಳಬೇಕು. ಕೋವಿಡ್ 19 ವೈರಸ್‌ ಲಕ್ಷಣಗಳಿದ್ದಲ್ಲಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸುವುದು. ಕೋವಿಡ್ 19  ವೈರಸ್‌ ಬಗ್ಗೆ ಗ್ರಾಮಗಳಲ್ಲಿ ಸುಳ್ಳು ಸುದ್ದಿ, ವದಂತಿ ಹರಡದಂತೆ ಕ್ರಮಕೈಗೊಳ್ಳುವುದು. ಈ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next