Advertisement

ಶಿಥಿಲಾವಸ್ಥೆ ಶಾಲಾ ಕಟ್ಟಡ ತೆರವಿಗೆ ಸೂಚನೆ

12:06 PM Dec 24, 2019 | Suhan S |

ಬಸವಕಲ್ಯಾಣ: ಸರ್ಕಾರ ಅಭಿವೃದ್ದಿಗಾಗಿ ನೀಡುತ್ತಿರುವ ಅನುದಾನವನ್ನು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಳಸಿಕೊಂಡು ನೂತನ ತಂತ್ರಗಳ ಯೋಜನೆ ಹಾಕಿಕೊಳ್ಳುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬೇಕು ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು.

Advertisement

ನಗರ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಯಲ್ಲಿ ನನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು. ಇಲ್ಲದಿದ್ದರೆ ಜಾಗಾ ಖಾಲಿ ಮಾಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಫಲಿತಾಂಶ ತಂದರೆ ಸಾಲದು. ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆ ಪ್ರಮುಖವಾದ ಕೆಲಸವಾಗಿದೆ. ಹೀಗಾಗಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳು ಕೂಡಲೇ ತೆರವುಗೊಳಿಸಬೇಕು. ಅದಕ್ಕೆ ಬೇಕಾದ ಅನುದಾನವನ್ನು ನೀಡಲು ನಾವು ಸಿದ್ಧರಿದ್ದೇವೆ ಮತ್ತು ಎಲ್ಲಾ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಸೇರಿದಂತೆ ಪಠ್ಯಕ್ಕೆ ಬೇಕಾದ ಸೌಕರ್ಯ ಒದಗಿಸಿಕೊಡಬೇಕು ಎಂದು ಸ್ಥಳದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ. ಹಳ್ಳದ ಅವರಿಗೆ ಹೇಳಿದರು.

ಈಗಾಗಲೇ ಕೋಟ್ಯಾಂತರ ರೂ. ಖರ್ಚುಮಾಡಿ ಖಾನಾಪೂರ, ನಾರಾಯಣಪೂರ ಸೇರಿದಂತೆ ವಿವಿಧೆಡೆ ಹೈಟೆಕ್‌ ಹಾಸ್ಟೆಲ್‌ ಕಟ್ಟಡ ನಿರ್ಮಿಸಿದ್ದೇವೆ. ಆದ್ದರಿಂದ ಶಿಥಿಲಾವಸ್ಥೆ ಯಲ್ಲಿರುವ ಕಟ್ಟಡಗಳು ತೆರವು ಗೊಳಿಸಿದರೆ, ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾದ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಇಲ್ಲದಿದ್ದರೆ ಏನಾದರೂ ಅವಘಡಗಳು ಸಂಭವಿಸಿದರೆ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಕೆಲವು ದಿನಗಳ ಒಳಗೆ ವಿದ್ಯುತ್‌ ಮುಕ್ತ ಸರ್ಕಾರಿ ಕಚೇರಿ ಮಾಡುವ ಯೋಚನೆ ನಮ್ಮದಾಗಿದೆ. ಹೀಗಾಗಿ ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಪತ್ರಬರೆಯಬೇಕು ಎಂದು ಸಲಹೆ ನೀಡಿದರು. ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ, ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ತಾ.ಪಂ.ಇಒ ಮಡೋಳಪ್ಪಾ ಪಿ.ಎಸ್‌. ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next