ಭೇರ್ಯ: ತಾಲೂಕಿನ ರೈತರು ರಾಜ್ಯದಲ್ಲಿಯೇ ಮೊದಲು ಭತ್ತ ಬೆಳೆಯಲಿ ಎಂದು ಚಾಮರಾಜ, ರಾಮಸಮುದ್ರ ನಾಳೆಗಳಿಂದ ನೀರು ಬಿಡಿಸಿದ್ದಕ್ಕೆ ಸರ್ಕಾರ ನೋಟಿಸ್ ನೀಡಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಸಮೀಪದ ಅರ್ಜುನಹಳ್ಳಿ ಗ್ರಾಮದಲ್ಲಿ 56 ಲಕ್ಷ ವೆಚ್ಚದ ನೂತನ ಗ್ರಾಪಂ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರ ಕೊಟ್ಟಿರುವ ನೋಟಿಸ್‌ಗೆ ತಕ್ಕ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ಮಹಾರಾಜರ ಕಾಲದಲ್ಲಿ ಈ 2 ನಾಲೆಗಳಿಗೆ ಯಾರು ಶಾಸಕರಾಗಿದ್ದರೂ ಅವರೇ ಅಧ್ಯಕ್ಷರು ಎಂದು ಹಿಂದೆಯೇ ತೀರ್ಮಾನವಾಗಿದೆ. ಅದು ತನಗೆ ತಿಳಿಸಿದೆ. ಜುಲೈ ಮೊದಲ ವಾರದಲ್ಲಿ ನಾಲೆಗಳಿಗೆ ನೀರು ಹರಿಸಿದ್ದಕ್ಕೆ ಕೊನೆ ಭಾಗದವರೆಗೂ ನಾಟಿ ಮಾಡಿರುವ ನಮ್ಮ ರೈತರು, ಇನ್ನೂ ಒಂದೂವರೆ ತಿಂಗಳೊಳಗೆ ಸಂಪೂರ್ಣವಾಗಿ ಉತ್ತಮ ಇಳುವರಿಯೊಂದಿಗೆ ಭತ್ತ ಬೆಳೆಯಲಿದ್ದಾರೆಂದರು.
ಮಳೆ ಬರುತ್ತಿದೆ ಬೆಳೆಗೆ ನೀರು ಕೊಡುತ್ತೇವೆ: ಸರ್ಕಾರ ಈಗ ಭತ್ತದ ಬೆಳೆಗೆ ನೀರು ಕೊಡುತ್ತೇವೆ ಎಂದು ಹೇಳುತ್ತಿದೆ. ಈಗ ಭತ್ತದ ಬೆಳೆ ಬೆಳೆಯಲು ಸಾಧ್ಯವೇ. 224 ಕ್ಷೇತ್ರದಲ್ಲಿ ಯಾವ ಶಾಸಕ ಭ್ರಷ್ಟಾಚಾರ, ಕೋಮುಗಲಭೆ, ಅಭಿವೃದ್ಧಿ, ಜಾತೀಯತೆ, ಮುಖ್ಯಮಂತ್ರಿಗಳಿಂದ ರೋಗಿಗಳಿಗೆ ಹೆಚ್ಚು ಅನುದಾನ ಮತ್ತು ಕ್ಷೇತ್ರದಲ್ಲಿ ಜನರ ಮಧ್ಯೆ ಇರುವುದು ಎಂದು 6 ಅಂಶಗಳಿರುವ ಶಾಸಕರನ್ನು ಆಯ್ಕೆಮಾಡಲು ಖುದ್ದು ತನಿಖೆ ಮಾಡಿಸಿದ್ದಾರೆ. 80 ಶಾಸಕರಲ್ಲಿ ಮೊದಲು ಕೆ.ಆರ್.ನಗರ ಕ್ಷೇತ್ರವನ್ನು ಆಯ್ಕೆ ಮಾಡಲಿದ್ದಾರೆಂದು ಹೇಳಿದರು.
ಅರ್ಜುನಹಳ್ಳಿ ಗ್ರಾಮಕ್ಕೆ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆಯಿಂದ 16 ಲಕ್ಷ ಹಾಗೂ ಸರ್ಕಾರದಿಂದ 40 ಲಕ್ಷ ನೀಡಲಾಗುತ್ತದೆ. ಅಲ್ಲದೆ, ಈ ಹಿಂದೆ ಆಶ್ರಯ ಮನೆಗಳಿಗೆ ಅರ್ಜಿ ಹಾಕುತ್ತಿದ್ದರು. ಆದರೆ ಈಗ, ನಿಮ್ಮ ಮನೆ ಬಾಗಿಲಿಗೆ ಬಂದು ಮನೆ ಕೊಡುತ್ತಿದ್ದೇವೆಂದರು.
ಅರ್ಜುನಹಳ್ಳಿ ಗ್ರಾಮಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸಿಮೆಂಟ್ ಕಾಂಕ್ರೀಟ್ ರಸ್ತೆ, ಅಂಬೇಡ್ಕರ್ ಭವನ ನಿರ್ಮಾಣ, 12 ಲಕ್ಷ ವೆಚ್ಚದಲ್ಲಿ ಜನತಾ ಬಡವಾಣೆ ರಸ್ತೆ ಅಭಿವೃದ್ಧಿ, ಇನ್ನೂ ಹದಿನೈದು ದಿನದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ, ಉಪಾಧ್ಯಕ್ಷೆ ವರಲಕ್ಷಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಳ್ಳಿ ಗಣೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಹೊಸ ಅಗ್ರಹಾರ ಗ್ರಾಪಂ ಅಧ್ಯಕ್ಷ ಯೋಗೇಶ್, ಗ್ರಾಪಂ ಸದಸ್ಯರಾದ ಯೂನೀಸ್, ರವಿ, ಶಿವರುದ್ರಪ್ಪ, ಶ್ರೀನಾಥ್, ಸಂಗೀತಾ, ಪಿಡಿಒ ರಾಜಕುಮಾರ್, ಜಿಪಂ ಜೆಇ ಮಲ್ಲಿಕಾರ್ಜುನ್ ಮತ್ತಿತರರಿದ್ದರು.
ಕೆ.ಆರ್.ನಗರ ತಾಲೂಕಿಗೆ ಮುಖ್ಯಮಂತ್ರಿಗಳಿಂದ 70 ಲಕ್ಷ ಅನುದಾನ ತಂದೆ ಎಂದೆಲ್ಲಾ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಸ್ತುತ ತಾಲೂಕಿಗೆ ಯಾರು ಕೈ ಅಭ್ಯರ್ಥಿ. ಮಾಜಿ ಸಂಸದ ಅಡಗೂರು ವಿಶ್ವನಾಥ್ ಒಬ್ಬರೇ ಮಾತ್ರ ತಾನೇ ಕೈ ಅಭ್ಯರ್ಥಿ ಎಂದು ಹೇಳುತ್ತಿದ್ದರು. ಈಗ ಅವರೂ, ಜೆಡಿಎಸ್ ಸೇರಿದ ನಂತರ ಕಾಂಗ್ರೆಸ್‌ನಲ್ಲಿ ಯಾರೂ ಕೂಡ ನಾನೇ ಅಭ್ಯರ್ಥಿ ಎಂದು ಹೇಳಿ ಕೊಳ್ಳುತ್ತಿಲ್ಲ.
-ಸಾ.ರಾ.ಮಹೇಶ್, ಶಾಸಕ