Advertisement

ಕಲುಷಿತ ನೀರಿನ ಘಟನೆ: FSL ವರದಿ ಕುರಿತು ಮರು ತನಿಖೆಗೆ ಸೂಚನೆ

09:37 PM Aug 06, 2023 | Team Udayavani |

ಚಿತ್ರದುರ್ಗ: ಕಲುಷಿತ ನೀರಿನ ಘಟನೆ ಕುರಿತು ನಿಖರವಾದ ವರದಿ ಇನ್ನೂ ಬಂದಿಲ್ಲ. ಒಂದೆರಡು ದಿನಗಳಲ್ಲಿ ಬರಲಿದ್ದು, ನಂತರ ಕಠಿಣ ಕ್ರಮ ಆಗಬೇಕಿದೆ. ಮೊದಲ ದಿನವೇ ಇಬ್ಬರನ್ನು ಅಮಾನತು ಮಾಡಲು ಕಾರ್ಯದರ್ಶಿಗೆ ಹೇಳಿದ್ದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ತಿಳಿಸಿದರು.

Advertisement

ಭಾನುವಾರ ಕವಾಡಿಗರಹಟ್ಟಿಯಲ್ಲಿ ಮೃತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣದ ಕುರಿತು ಗಂಭೀರ ತನಿಖೆ ಆರಂಭವಾಗಿದೆ. ತನಿಖೆ ನಂತರ ತಪ್ಪಿತಸ್ಥರ ಮೇಲೆ ಕಠಿಣ ಶಿಕ್ಷೆ ಆಗಲಿದೆ. ಬೇರೆ ಯಾವುದೇ ವಾರ್ಡ್‌ನಲ್ಲಿ ಸಮಸ್ಯೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೋಮವಾರ ಬೆಂಗಳೂರಿನಲ್ಲಿ ಸಭೆ ನಡೆಸಿ ಎಫ್‌ಎಸ್‌ಎಲ್‌ ವರದಿ ಕುರಿತು ಮರು ತನಿಖೆ ನಡೆಸುವಂತೆ ತಿಳಿಸುತ್ತೇನೆ. ಈ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದು. ಅಮಾನತು ಮಾಡುವುದರಿಂದ ಎಲ್ಲ ಸಮಸ್ಯೆ ಬಗೆಹರಿಯುವುದಿಲ್ಲ. ತನಿಖಾ ವರದಿ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪರಿಹಾರವಾಗಿ ಈಗಾಗಲೇ ಹತ್ತು ಲಕ್ಷ ರೂ. ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತನಾಡಿ ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಕವಾಡಿಗರಹಟ್ಟಿ ಪ್ರಕರಣದ ಸಮಗ್ರ ತನಿಖೆಯಾಗಲಿ: ರವಿ
ಚಿತ್ರದುರ್ಗ: ಕವಾಡಿಗರಹಟ್ಟಿ ದುರಂತಕ್ಕೆ ಕಲುಷಿತ ಅಥವಾ ವಿಷಪೂರಿತ ನೀರು ಕಾರಣವೋ ಗೊತ್ತಿಲ್ಲ. ಆದರೆ ಒಂದು ಪ್ರದೇಶದಿಂದ ಇಷ್ಟೊಂದು ಜನ ಆಸ್ಪತ್ರೆಗೆ ದಾಖಲಾಗಿ, ಐವರು ಮೃತರಾಗುವವರೆಗೆ ಜಿಲ್ಲಾಡಳಿತ ಮೈಮರೆಯಬಾರದಿತ್ತು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಭಾನುವಾರ ನಗರದ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಸಮಗ್ರ ತನಿಖೆ ಆಗಬೇಕು.

ಸಂತ್ರಸ್ತರ ಜತೆ ಮಾತನಾಡಿದ್ದೇನೆ. ಮೃತರ ಕುಟುಂಬಕ್ಕೆ ಬಹಳ ಒತ್ತಡದ ನಂತರ ಚೆಕ್‌ ವಿತರಣೆ ಮಾಡಲಾಗಿದೆ. 25 ಲಕ್ಷ ರೂ. ಪರಿಹಾರ ಕೊಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು. ಜಿಲ್ಲಾಡಳಿತ ಹಾಗೂ ನಗರಸಭೆ ನಿರ್ಲಕ್ಷéದಿಂದ ಈ ದುರಂತ ಆಗಿದೆ ಎನ್ನುವುದು ಜನರ ಭಾವನೆಯಾಗಿದೆ. ಮೃತರ ಕುಟುಂಬದಲ್ಲಿರುವ ವಿದ್ಯಾವಂತರಿಗೆ ಸರ್ಕಾರ ಉದ್ಯೋಗ ನೀಡಬೇಕು. ರಾಜ್ಯದಲ್ಲಿ ಎಲ್ಲಿಯೂ ಇಂತಹ ಘಟನೆ ಮರುಕಳಿಸದಂತೆ ಮುಂದೆ ಎಚ್ಚರಿಕೆ ವಹಿಸಬೇಕು. ಜಿಲ್ಲಾ ಸರ್ವೇಕ್ಷಣಾ ಘಟಕದ ವರದಿಯಲ್ಲಿ ಕಾಲರಾ ಅಂಶ ಪತ್ತೆಯಾಗಿದೆ. ಸರ್ಕಾರ ಇಷ್ಟಕ್ಕೆ ಸುಮ್ಮನಾಗದೆ ಎಲ್ಲ ಕಡೆಗಳಲ್ಲಿ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿಗೆ ಬರುವಂತಹ ದಾರಿದ್ರ ಬರುವುದು ಬೇಡ. ದಾರಿದ್ರ ಯಾರಿಗೂ ಒಳ್ಳೆಯದಲ್ಲ. ಅಂತಹ ಸ್ಥಿತಿ ಕುಮಾರಸ್ವಾಮಿ ಅವರಿಗಂತೂ ಬೇಡವೇ ಬೇಡ.
– ಸಿ.ಟಿ. ರವಿ, ಬಿಜೆಪಿ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next