ಶಿವಮೊಗ್ಗ :ಜಿಲ್ಲೆಯಾದ್ಯಂತ ಭೀಕರ ಮಳೆಗೆ ಸಾವು ನೋವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಿಲ್ಲೆಯಲ್ಲಿ ಸಂಭವಿಸಿದ ಸಾವು ನೋವುಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನೆರೆಯಿಂದ ಸಾವನಪ್ಪಿದವರಿಗೆ ನಾಳೆಯೊಳಗೆ ೫ ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಜಿಲ್ಲೆಯ ನೆರೆಪೀಡಿತ ಪ್ರದೇಶಗಳ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಸೂಚನೆಯನ್ನು ಹೊರಡಿಸಲಾಯಿತು.
ಜಿಲ್ಲೆಯಾದ್ಯಂತ ಹಾನಿಗಳ ಕುರಿತು ಅಧಿಕಾರಿಗಳಿಂದ ಸಮಗ್ರ ವರದಿಯನ್ನು ಪಡೆದ ಮುಖ್ಯಮಂತ್ರಿ ಜಿಲ್ಲೆಯಲ್ಲಿ ಈವರೆಗೆ, ನೆರೆಯಿಂದಾಗಿ 7 ಜನರ ಸಾವನಪ್ಪಿದ್ದಾರೆ ಹಾಗೂ ಸುಮಾರು 87 ರಾಸುಗಳ ಸಾವನಪ್ಪಿರುವ ವರದಿ ಪಡೆದುಕೊಂಡರು.
ಒಂದು ಹಸು ಸಾವಿಗೆ 30 ಸಾವಿರ ರೂ. ಪರಿಹಾರ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ನಾಳೆಯೊಳಗೆ ನೆರೆಯಿಂದಾಗಿ ಸಾವು ಕಂಡಿರುವವರಿಗೆ 5 ಲಕ್ಷ ರೂ. ಪರಿಹಾರ ನೀಡಲು ಸೂಚಿಸಿದ್ದಾರೆ.
ಒಂದು ಕಡೆ ನೆರೆ ವೀಕ್ಷಿಸುತ್ತಿದ್ದವರು ಅಪಘಾತದಲ್ಲಿ ಸಾವನ್ನಪ್ಪಿದ್ದು ಇದನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಪರಿಹಾರ ನೀಡಲು ಆದೇಶ ನೀಡಿದ್ದಾರೆ.
ಅದೇ ರೀತಿ ನೆರೆ ಬಂದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸಾವನಪ್ಪಿರುವವರಿಗೆ ತಕ್ಷಣವೇ ಮೆಸ್ಕಾಂನಿಂದ ಪರಿಹಾರ ಕೂಡಲೇ ನೀಡಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ತುರ್ತು ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ ಎಂದ ಅಧಿಕಾರಿಯನ್ನು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು.