ಶಿವಮೊಗ್ಗ: ಮಲೆನಾಡು ಭಾಗದಲ್ಲಿ ವಿದ್ಯುತ್ ಕಂಬಗಳ ಸಮೀಪ ಅಕೇಶಿಯಾ ಮರಗಳನ್ನು ನೆಟ್ಟಿರುವುದರಿಂದ ಗಾಳಿಗೆ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕಡೆಗಳಲ್ಲಿ ಮರಗಳನ್ನು ತಕ್ಷಣ ತೆರವುಗೊಳಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎರಡು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸದರೆ ಮಾತ್ರ ಈ ಭಾಗದ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಹಲವು ಸಮಸ್ಯೆಗಳು ಉಂಟಾಗಿವೆ ಎಂದು ಹೇಳಿದರು.
ಅಕೇಶಿಯಾ ಮರ ಬಿದ್ದರೆ 10ರಿಂದ 15 ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗುತ್ತಿದೆ. ಅರಣ್ಯ ಇಲಾಖೆ ಅಂತಹ ಮರಗಳನ್ನು ಮೊದಲೇ ಗುರುತಿಸಿ ತೆರವುಗೊಳಿಸಬೇಕು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅಕೇಶಿಯಾ ಹಾಗೂ ನೀಲಗಿರಿ ಸಸಿಗಳನ್ನು ನೆಡಬಾರದು. ಅಕೇಶಿಯಾ ಮರಗಳ ತೆರವುಗೊಳಿಸಲು ಕೋರಿ ಮೆಸ್ಕಾಂ ಸಲ್ಲಿಸುವ ಪ್ರಸ್ತಾವನೆಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.
ತೀರ್ಥಹಳ್ಳಿ ಭಾಗದಲ್ಲಿ ಮಳೆ ಗಾಳಿಯಿಂದಾಗಿ 314 ವಿದ್ಯುತ್ ಕಂಬಗಳು ಬಿದ್ದಿದ್ದು, 116 ಕಂಬಗಳನ್ನು ಅಳವಡಿಸಲಾಗಿದೆ. ಇನ್ನುಳಿದ ಕಂಬಗಳನ್ನು ಮೂರು ದಿನಗಳ ಒಳಗಾಗಿ ಅಳವಡಿಸಲಾಗುವುದು. ಈ ಭಾಗದಲ್ಲಿ ವಿದ್ಯುತ್ ಕಂಬಗಳಿಗೆ ಅಪಾಯಕಾರಿಯಾಗಿರುವ 940 ಅಕೇಶಿಯಾ ಮರಗಳನ್ನು ತೆರವುಗೊಳಿಸುವ ಕುರಿತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಮರಗಳನ್ನು ತೆರವುಗೊಳಿಸಲು ಅಗತ್ಯವಾದ ಕಟ್ಟರ್‌ಗಳನ್ನು ಖರೀದಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳಿಗೆ ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅರಣ್ಯದ ಪ್ರಾಣಿ- ಪಕ್ಷಿಗಳಿಗೆ ಅನುಕೂಲಕರವಾಗಿರುವ ಇಂತಹ ಯೋಜನೆಗಳ ಜಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಬಾರದು ಎಂದು ಅವರು ಸ್ಪಷ್ಪಪಡಿಸಿದರು.
ಶಾಸಕ ಆರಗ ಜ್ಞಾನೇಂದ್ರ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ, ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾ ಕಾರಿ ಶಂಕರ್, ಸಾಗರ ವಿಭಾಗದ ಡಿಎಫ್‌ಒ ಮೋಹನಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು.