ಹುಬ್ಬಳ್ಳಿ: ಮಳೆಯಿಂದಾಗಿ ಹಳೇ ಹುಬ್ಬಳ್ಳಿ ಭಾಗಕ್ಕೆ ನೀರು ಪೂರೈಸುವ ನೀರಸಾಗರ ಜಲಾಶಯ ಭರ್ತಿಯಾಗಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ಹಳೇ ಹುಬ್ಬಳ್ಳಿ ಭಾಗದಲ್ಲಿ 10-12 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಇದೀಗ ಜಲಾಶಯಗಳಲ್ಲಿ ನೀರು ಭರ್ತಿಯಾಗಿದ್ದು, ಇನ್ನಾದರೂ ಜನತೆಗೆ ಸಮರ್ಪಕ ನೀರು ಪೂರೈಸುವಂತೆ ಸೂಚಿಸಿದರು.
ಕ್ಷೇತ್ರ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಭಾಗದ ಕೆಲವೆಡೆ ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಮಿಶ್ರಣವಾಗುತ್ತಿರುವ ಬಗ್ಗೆ ದೂರುಗಳಿವೆ. ಕೂಡಲೇ ಪೈಪ್‌ಲೈನ್‌ಗಳನ್ನು ಪರಿಶೀಲಿಸಿ, ಸಮಸ್ಯೆಗಳನ್ನು ಸರಿಪಡಿಸುವಂತೆ ಶಾಸಕರು ತಾಕೀತು ಮಾಡಿದರು.
ಸೋನಿಯಾ ಗಾಂಧಿ ನಗರದಲ್ಲಿ ನಿರ್ಮಿಸಿರುವ ಬೃಹತ್ ಓವರ್‌ಹೆಡ್ ಟ್ಯಾಂಕ್ ಈವರೆಗೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಅನೇಕ ಬಾರಿ ಅಧಿಕಾರಿಗಳಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಲ್ಲಿ ನೀರು ಸಂಗ್ರಹ ಮಾಡಿ ಸುತ್ತಲಿನ ಜನರಿಗೆ ನೀರು ಪೂರೈಸಲು ಕ್ರಮ ಜರುಗಿಸಬೇಕು. ಇದರಲ್ಲಿ ಮತ್ತೆ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಎಚ್ಚರಿಸಿದರು.
ಜಲಮಂಡಳಿ ಇಇ ರಾಜಗೋಪಾಲ ಮಾತನಾಡಿ, ಇದೀಗ ಎಲ್ಲೆಡೆ 8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆಯಿಲ್ಲ ಎಂದರು. ಜಲಮಂಡಳಿಯ ಶಿಂಗೋಟಿ, ರಿಯಾಜ್, ವಿನಾಯಕ, ದೇವೂರ ಇನ್ನಿತರರು ಇದ್ದರು.