ಮಹಾನಗರ: ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿದರೆ ಟ್ರಾಫಿಕ್ ಪೊಲೀಸರು ಸ್ಥಳದಲ್ಲಿಯೇ ದಂಡ ವಸೂಲಿ ಮಾಡುತ್ತಾರೆ ಅಥವಾ ನೋಟಿ ಸ್ ನೀಡುತ್ತಾರೆ. ಆದರೆ ವಾಹನ ಸಂಚರಿಸದಿದ್ದರೂ ಮಂಗಳೂರು ಟ್ರಾಫಿಕ್ ಪೊಲೀಸರಿಂದ ಸಂಚಾರಿ ನಿಯಮ ಉಲ್ಲಂಘಿಸಲಾಗಿದೆ ಎಂದು ಮನೆಗೆ ನೋಟಿಸ್ ಬರುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.
ನಗರದ ಹೊರವಲಯ ಬಜಪೆ ನಿವಾಸಿ ಕೆ. ಸುಧಾಕರ ಕಾಮತ್ ಅವರ ಮನೆಗೆ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದೀರಿ ಎಂದು ಅ. 6ರಂದು ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಒಟ್ಟಾರೆ ನಾಲ್ಕು ನೋಟಿಸ್‌ಗಳು ಬಂದಿವೆಯಂತೆ. ಏಕಮುಖ ಸಂಚಾರ, ಪ್ಯಾನ್ಸಿ ನಂಬರ್ ಪ್ಲೇಟ್ ಬಳಕೆ, ಹೆಲ್ಮೆಟ್ ರಹಿತ ಬೈಕ್ ಚಾಲನೆ, ಹಿಂದುಗಡೆ ಸವಾರ ಹೆಲ್ಮೆಟ್ ಧರಿಸಲಿಲ್ಲ ಎಂಬ ನಾಲ್ಕು ಪ್ರಕರಣವನ್ನು ನೋಟಿಸ್‌ನಲ್ಲಿ ದಾಖಲಿಸಲಾಗಿದೆ.
ಈ ಪ್ರಕರಣವನ್ನು ನಗರದ ಬೆಸೆಂಟ್ ಮಹಿಳಾ ಕಾಲೇಜು ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ ಕೂಡಲೇ ದಂಡ ಕಟ್ಟುವಂತೆ ನೋಟಿಸ್‌ನಲ್ಲಿ ನಮೂದಿಸಲಾಗಿದೆ. ಸುಧಾಕರ ಕಾಮತ್ ಅವರು ಹೇಳುವ ಪ್ರಕಾರ ಅವರು ಆ ದಿನ ಮಂಗಳೂರಿನ ಕಡೆಗೆ ಬರಲಿಲ್ಲವಂತೆ. ಅಲ್ಲದೆ ಅವರ ನಂಬರ್ ಪ್ಲೇಟ್ ಕಾನೂನು ಪ್ರಕಾರದಲ್ಲೇ ಇದೆಯಂತೆ. ನೋಟಿಸ್ ಬಂದಾಕ್ಷಣ ಅವರು ಕದ್ರಿ ಬಳಿ ಇರುವ ಟ್ರಾಫಿಕ್ ಕಂಟ್ರೋಲ್ ರೂಂ ಮತ್ತು ಪಾಂಡೇಶ್ವರ ಠಾಣೆಗೆ ವಿಚಾರಿಸಿದ್ದಾರೆ. ಸಿ.ಸಿ. ಕೆಮರಾದ ದಾಖಲೆ ಪರಿಶೀಲನೆ ಮಾಡಿ ನೋಟಿಸ್ ನೀಡಲಾಗಿದೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಆದರೆ ಬೆಸೆಂಟ್ ಮಹಿಳಾ ಕಾಲೇಜು ರಸ್ತೆಯಲ್ಲಿ ಸಿ.ಸಿ. ಕೆಮರಾವನ್ನು ಅಳವಡಿಸಲಿಲ್ಲ. ಹೀಗಿದ್ದಾಗ, ಯಾವ ಆಧಾರದಲ್ಲಿ ನೋಟಿಸ್ ಕಳುಹಿಸಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸರ ಬಳಿ ಕೇಳಿದಾಗ ಅವರು ಪಿವಿಎಸ್ ಬಳಿಯ ಸಿ.ಸಿ. ಕೆಮರಾ ನೋಡಿ ದೂರು ದಾಖಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಪಿವಿಎಸ್ ಬಳಿ ಏಕಮುಖ ಸಂಚಾರವಿಲ್ಲವಲ್ಲ ಎಂದು ಪ್ರಶ್ನಿಸಿದಾಗ ನಿರುತ್ತರರಾಗಿದ್ದಾರೆ ಎಂಬುವುದು ಕಾಮತ್ ಅವರ ವಾದ.
ಪರಿಶೀಲನೆ ನಡೆಸುತ್ತೇವೆ
ಎಎಂಎಸಿಯಲ್ಲಿ ಸುಳ್ಳು ದೂರು ದಾಖಲಾಗಲು ಸಾಧ್ಯವಿಲ್ಲ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತದೆ. ಅಂದ ಮೇಲೆ ಸಣ್ಣ ಪುಟ್ಟ ತಪ್ಪುಗಳಾಗಿರಬಹುದು. ನೋಟಿ ಸ್ ಬಂದ ಬಳಿಕ ಆ ಬಗ್ಗೆ ಅನುಮಾನವಿದ್ದರೆ, ಟ್ರಾಫಿಕ್ ಕಮೀಷನರ್ ಅವರನ್ನು ಭೇಟಿ ಮಾಡಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ತಪ್ಪು ದೂರು ದಾಖಲಾಗಿದ್ದೇ ಆದರೆ ಆ ಪ್ರದೇಶದಲ್ಲಿದ್ದ ಟ್ರಾಫಿಕ್ ಪೊಲೀಸರನ್ನು ಕೂಡ ವಿಚಾರಿಸಿ ಪರಿಶೀಲನೆ ನಡೆಸುತ್ತೇವೆ.
– ಮಂಜುನಾಥ ಶೆಟ್ಟಿ, ಎಸಿಪಿ ಟ್ರಾಫಿಕ್
ನೋಟಿಸ್ ರದ್ದುಗೊಳಿಸುತ್ತೇವೆ
ನೋಟಿಸ್ ಬಂದ ಕೂಡಲೇ ನಾನು ಕದ್ರಿ ಟ್ರಾಫಿಕ್ ಇಲಾಖೆಯನ್ನು ಸಂಪರ್ಕಿಸಿದಾಗ ಆಗಸ್ಟ್‌ಗಳಿನ ಸಿ.ಸಿ. ಟಿವಿ ದೃಶ್ಯಾವಳಿಗಳು ಲಭ್ಯವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಸಮಜಾಯಿಷಿ ನೀಡಿ, ನೋಟಿಸ್ ರದ್ದುಗೊಳಿಸುತ್ತೇವೆ ಎಂದಿದ್ದಾರೆ.
– ಸುಧಾಕರ ಕಾಮತ್