ನವದೆಹಲಿ: ಸುಪ್ರೀಂಕೋರ್ಟ್ ನ ಸಿಜೆಐ (Chief justice of india) ಹುದ್ದೆ ತುಂಬಾ ಜವಾಬ್ದಾರಿಯುತವಾದದ್ದು. ಅದೊಂದು ತುಂಬಾ ಕಷ್ಟಕರವಾದ ಸ್ಥಳವಾಗಿದೆ. ನ್ಯಾಯಾಲಯಗಳಲ್ಲಿ ಹೆಚ್ಚಿನ ಸ್ಪರ್ಧೆ ಇರುವುದರಿಂದ ಗುರುತರವಾದ ಜವಾಬ್ದಾರಿಯೂ ಇದೆ. ಪ್ರತಿಯೊಬ್ಬರಿಗೂ ಅವರವರ ಕೇಸ್ ಗಳಲ್ಲಿ ಜಯಗಳಿಸಲು ಬಯಸುತ್ತಾರೆ…ಇದು ಸುಪ್ರೀಂಕೋರ್ಟ್ ನಿವೃತ್ತ ಸಿಜೆಐ ಎಸ್.ಎ.ಬೋಬ್ಡೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:4 ವರ್ಷಗಳಲ್ಲಿ ಸೈಬರ್ ಕಳ್ಳರಿಂದ 721 ಕೋಟಿ ರೂ.ಲೂಟಿ
ಎಸ್.ಎ.ಬೋಬ್ಡೆ ಅವರು ನವದೆಹಲಿಯಲ್ಲಿ ಇಂಡಿಯಾ ಟುಡೇಯ Conclaveನಲ್ಲಿ ಭಾಗವಹಿಸಿ ಮಾತನಾಡಿದ್ದು, ನಿಜಕ್ಕೂ ಒಮ್ಮೊಮ್ಮೆ ಕೆಲವು ಹೊಣೆಗೇಡಿತನದ ಟೀಕೆಗಳು ಕೇಳಿಬಂದಾಗ ನ್ಯಾಯಾಧೀಶರು ಸಮಸ್ಯೆಯನ್ನು ಎದುರಿಸುವ ಪ್ರಸಂಗ ಎದುರಾಗುತ್ತದೆ. ಸಿಜೆಐ ಯಾವಾಗಲೂ ಉತ್ತರದಾಯಿಗಳಾಗಿರಬೇಕು ಮತ್ತು ಯಾವುದೇ ಸಂದರ್ಭಕ್ಕೂ ಹೊಣೆಯಾಗಬೇಕಾಗುತ್ತದೆ ಎಂದರು.
“ಮುಖ್ಯ ನ್ಯಾಯಮೂರ್ತಿಗಳ ಹುದ್ದೆ ಮುಳ್ಳಿನ ಕಿರೀಟವೇ” ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ನಿವೃತ್ತ ಸಿಜೆಐ ಎಸ್.ಎ.ಬೋಬ್ಡೆ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ನ ತೀರ್ಪುಗಳು ರಾಜಕೀಯದಿಂದ ಪ್ರಭಾವಿತವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಎಸ್.ಎ.ಬೋಬ್ಡೆ, ರಾಜಕೀಯ ಎಂಬ ಶಬ್ದವನ್ನು ಯಾವುದಕ್ಕೆ ಬೇಕಾದರೂ ಜೋಡಿಸಬಹುದು. ಉದಾಹರಣೆಗೆ ರಾಫೇಲ್ ಮತ್ತು ಅಯೋಧ್ಯೆ ಪ್ರಕರಣಗಳಂತಹ ಪ್ರಮುಖ ತೀರ್ಪುಗಳು ಇದಕ್ಕೆ ಹೊರತಾಗಿಲ್ಲ ಎಂದರು.
ರಾಫೇಲ್ ವಿಚಾರದಲ್ಲಿ ಯಾವ ರಾಜಕೀಯವೂ ಇಲ್ಲ. ಅದೊಂದು ರಕ್ಷಣಾ ಒಪ್ಪಂದವಾಗಿತ್ತು. ಅಯೋಧ್ಯೆ ವಿವಾದ ಸ್ವಾತಂತ್ರ್ಯ ಪೂರ್ವದಿಂದಲೂ ನಡೆಯುತ್ತಿತ್ತು. ರಾಜಕಾರಣಿಗಳು ಈ ಬಗ್ಗೆ ಮಾತನಾಡುತ್ತಾರೆಯೇ ಹೊರತು, ಇದರಲ್ಲಿ ರಾಜಕೀಯವೇನೂ ಇಲ್ಲ ಎಂದು ಬೋಬ್ಡೆ ಹೇಳಿದರು.
ನ್ಯಾಯಾಲಯಗಳಲ್ಲಿ ನಾವು ಯಾವುದೇ ರಾಜಕೀಯದಲ್ಲಿ ಶಾಮೀಲಾಗುವುದಿಲ್ಲ. ಅಲ್ಲದೇ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ದುಷ್ಯಂತ್ ದವೆ ಅವರು ಸುಪ್ರೀಂಕೋರ್ಟ್ ಪ್ರಧಾನಿ ಮೋದಿಗೆ ಭಯಪಡುತ್ತಿದೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಎಸ್.ಎ.ಬೋಬ್ಡೆ, ಅವರ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಲು ನಾನು ಇಷ್ಟಪಡುವುದಿಲ್ಲ ಎಂದು ತಿಳಿಸಿದರು.