ನವದೆಹಲಿ: ಸಾಹಿತಿ, ವಿಮರ್ಶಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್
ಸೋಮವಾರ ಕರ್ನಾಟಕ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
“ತನಿಖೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಏನೇನೂ ಮಾಡುತ್ತಿಲ್ಲ.ಎಲ್ಲರನ್ನೂ ಮೂರ್ಖರನ್ನಾಗಿಸುತ್ತಾ ಸಾಗುತ್ತಿದೆ’ ಎಂದು ಹೇಳಿದೆ.
ಅಲ್ಲದೆ, ಕರ್ನಾಟಕ ಸರ್ಕಾರ ಸಲ್ಲಿಸುವ ತನಿಖೆಯ ಸ್ಥಿತಿಗತಿ ವರದಿಯನ್ನು ಪರಿಶೀಲಿಸಿದ ಬಳಿಕ, ಅಗತ್ಯ ಕಂಡುಬಂದರೆ ಪ್ರಕರಣವನ್ನು ಬಾಂಬೆ ಹೈಕೋರ್ಟ್‌ಗೆ ವರ್ಗಾಯಿಸಿ, ತನಿಖೆಗೆ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಸೂಚಿಸುತ್ತೇವೆ ಎಂಬ ಸುಳಿವನ್ನೂ ಸುಪ್ರೀಂಕೋರ್ಟ್ ನೀಡಿದೆ.
ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸ ಬೇಕೆಂದು ಕೋರಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ನವಿನ್ ಸಿನ್ಹಾ ಅವರನ್ನೊಳಗೊಂಡ ನ್ಯಾಯಪೀಠ, ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ ನಡೆದಿರುವ ತನಿಖೆಯ ವಿವರಗಳನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು 2 ವಾರಗಳೊಳಗೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
“ಪ್ರಕರಣಕ್ಕೆ ಸಂಬಂಧಿಸಿ ಏನು ತನಿಖೆ ನಡೆಸಿದ್ದೀರಿ? ಏನೇನೂ ಇಲ್ಲ. ನೀವು ಎಲ್ಲರನ್ನೂ ಮೂರ್ಖರನ್ನಾಗಿಸುತ್ತಿದ್ದೀರಿ ಅಷ್ಟೆ. ತನಿಖೆ ಪೂರ್ಣಗೊಳಿಸಲು ಇನ್ನೆಷ್ಟು ದಿನ ತೆಗೆದುಕೊಳ್ಳುತ್ತೀರಾ? ಈ ಬಗ್ಗೆ ಉತ್ತರ ಕೊಡಿ, ಇಲ್ಲವೇ ನಾವೇ ಆದೇಶ ಹೊರಡಿಸುತ್ತೇವೆ’ ಎಂದಿತು ನ್ಯಾಯಪೀಠ. ಕರ್ನಾಟಕ ಸರ್ಕಾರದ ಪರ ವಕೀಲ ದೇವದತ್ತ ಕಾಮತ್ ವಾದ ಮಂಡಿಸಿದರು. 2015ರಲ್ಲಿ ಧಾರವಾಡದ ನಿವಾಸದಲ್ಲೇ ಕಲಬುರ್ಗಿ ಅವರ ಹತ್ಯೆ ನಡೆದಿತ್ತು.